ಯಾದಗಿರಿ | ಜ.17 ರಿಂದ 21ರವರೆಗೆ ʼಕಲ್ಯಾಣ ಕರ್ನಾಟಕ ವಿಭಾಗದ ದ್ವಿತೀಯ ಜಾಂಬೋರೇಟ್ ಕಾರ್ಯಕ್ರಮʼ

Update: 2025-01-10 13:19 GMT

ಯಾದಗಿರಿ : ಜ.17 ರಿಂದ 21 ರವರೆಗೆ ನಗರದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ವಿಭಾಗದ ದ್ವಿತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಗೆ ಅಧಿಕಾರಿಗಳು ಎಲ್ಲ ರೀತಿಯಿಂದ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ʼಕಲ್ಯಾಣ ಕರ್ನಾಟಕ ವಿಭಾಗದ ದ್ವಿತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ʼ ಸಿದ್ಧತೆಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಜ.17 ರಿಂದ 21 ರವರೆಗೆ ಐದು ದಿನಗಳ ಕಾಲ ನಡೆಯುವ ಈ ಜಾಂಬೋರೇಟ್ ದಲ್ಲಿ ಸುಮಾರು 3,000 ದಿಂದ 4,000 ಮಕ್ಕಳು ಭಾಗವಹಿಸಲಿದ್ದು, ಜಿಲ್ಲಾ ಕ್ರೀಡಾಂಗಣವನ್ನು ಸರ್ವ ರೀತಿಯಿಂದ ಸಿದ್ಧಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ತಂಡಕ್ಕೆ ಸಹಕಾರ ನೀಡುವಂತೆ ಸೂಚನೆ ನೀಡಿದರು.

ಜ.16ರಂದು ಸಂಜೆ ಮಕ್ಕಳು ನಗರಕ್ಕೆ ಆಗಮಿಸಲು ಆರಂಭವಾಗುವ ಹಿನ್ನೆಲೆಯಲ್ಲಿ ಜ.19 ರವರೆಗೆ ನಗರದ ಡಾನ್ ಬಾಸ್ಕೋ ಶಾಲೆಯಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಬೇಕು. ನಂತರ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಇತರೆ ದಿನಗಳಂದು ಬೇರೆಡೆಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಸ್ತವ್ಯ ಸ್ಥಳಗಳ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.

ಜಾಂಬೋರೇಟ್ ಗ,ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಬಸ್ ಗಳ ವ್ಯವಸ್ಥೆ, ಆರೋಗ್ಯ ಸಂಬಂಧಿತ ಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುವಂತೆ ಸೂಚನೆ ನೀಡಿದ ಅವರು, ಐದು ದಿನಗಳ ಕಾಲ 24/7 ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಲು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಐದು ದಿನಗಳ ಕಾಲ ಮಕ್ಕಳ ಉತ್ಸುಕತೆ ಹೆಚ್ಚಾಗಿರುವುದರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ, ಹೊರಗೆ, ಡಾನ್ ಬಾಸ್ಕೋ ಶಾಲೆ ವ್ಯಾಪ್ತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗ್ನಿಶಾಮಕ ಇಲಾಖೆ , ಆರೋಗ್ಯ ಅಂಬ್ಯುಲೆನ್ಸ್ ನುರಿತ ವೈದ್ಯರೊಂದಿಗೆ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಅಧ್ಯಕ್ಷ ಸುರೇಶ್ ಸಜ್ಜನ್, ಕಲ್ಯಾಣ ಕರ್ನಾಟಕ ಉಸ್ತುವಾರಿ ಮಲ್ಲೇಶ್ವರಿ ಜೂಜಾರೆ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಅಳ್ಳಳ್ಳಿ, ಅನಿಲ್ ಕುಮಾರ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News