ಯಾದಗಿರಿ | ಜ.17ರಿಂದ 21ರವರೆಗೆ ಕಲ್ಯಾಣ ಕರ್ನಾಟಕ ವಿಭಾಗದ ದ್ವಿತೀಯ ಜಾಂಬೋರೇಟ್: ಸುರೇಶ ಸಜ್ಜನ್
ಯಾದಗಿರಿ : ಭಾರತ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜ.17ರಿಂದ 21ರವರೆಗೆ ಕಲ್ಯಾಣ ಕರ್ನಾಟಕ ವಿಭಾಗದ ದ್ವಿತೀಯ ಜಾಂಬೋರೇಟ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಸ್ಥೆ ಅಧ್ಯಕ್ಷ ಸುರೇಶ ಸಜ್ಜನ್ ತಿಳಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಇದಕ್ಕಾಗಿ ಕಳೆದ ಒಂದು ತಿಂಗಳಿಂದ ಜಿಲ್ಲಾಡಳಿತದೊಂದಿಗೆ ನಮ್ಮ ಜಿಲ್ಲಾ ಘಟಕವು ಹಗಳಿರಳು ಶ್ರಮಿಸಿ ಸಜ್ಜುಗೊಳಿಸಿದೆ ಎಂದರು.
ವಿಶೇಷ ಆಹ್ವಾನಿತರಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವಾ, ಬೀದರ್ ಶಾಹಿನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ಫಾದರ್ ಸಜಿ ಜಾರ್ಜ್ ಭಾಗವಹಿಸಲಿದ್ದಾರೆ. ಕೆಕೆ ಭಾಗದ ಎಲ್ಲ ಜಿಲ್ಲೆಗಳಿಂದ ಸುಮಾರು ̧3500 ಮಕ್ಕಳು ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ಶಾಲೆಗಳ ಮತ್ತು ಇಲಾಖೆಗಳ ನೂರಾರು ಜನರು ಜಿಲ್ಲಾ ಸಂಸ್ಥೆಯೊಂದಿಗೆ ಕೈಜೋಡಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಇಲ್ಲಿಗೆ ಆಗಮಿಸಲಿದ್ದಾರೆಂದು ಹೇಳಿದರು.
ಜಿಲ್ಲಾ ಸಂಸ್ಥೆಯ ಪ್ರಮುಖರಾದ ಸಿ.ಎಂ.ಪಟ್ಟೇದಾರ, ಮಲ್ಲೇಶ್ವರಿ ಜುಜಾರೆ, ನಾಗರತ್ನ ಅನಪುರ, ರಾಘವೇಂದ್ರ ಅಳ್ಳಳ್ಳಿ, ವೀರೇಂದ್ರ ಪಾಟೀಲ್, ಬಸವರಾಜ ಗೋಗಿ, ಸುವರ್ಣ ಆರ್. ಅಳ್ಳಳ್ಳಿ, ಸಿದ್ದು ಪಾಟೀಲ್, ಜಯಲಲಿತಾ ಪಾಟೀಲ್, ಮಂಜುಳಾ ಗೂಳಿ, ಗುಂಡಣ್ಣ ತುಂಬಗಿ ಸೇರಿದಂತೆ ಇತರರಿದ್ದರು.
ಈ ಐದು ದಿನಗಳ ಕಾರ್ಯಕ್ರಮಕ್ಕೆ ಸುಮಾರು 70ರಿಂದ 80 ಲಕ್ಷ ರೂ. ಖರ್ಚು ಆಗಲಿದೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ವೈಯಕ್ತಿಕ ಹತ್ತು ಲಕ್ಷ ರೂ. ನೀಡಿದ್ದಾರೆ. ತಾವು ಐದು ಲಕ್ಷ ನೀಡಿದ್ದಾಗಿ ತಿಳಿಸಿದ ಬೀದರ್ ಶಾಹಿನ್ ಸಂಸ್ಥೆಯವರು 7 ಲಕ್ಷ ರೂ. ಖರ್ಚು ಮಾಡಲಿದ್ದಾರೆ. ಹೀಗೆ ಯಾದಗಿರಿ ಜಿಲ್ಲೆ ಸೇರಿದಂತೆಯೇ ಕಲ್ಯಾಣ ಕರ್ನಾಟಕದ ಭಾಗದ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳು, ವ್ಯಾಪಾರಿಗಳು, ಶಾಲಾ, ಕಾಲೇಜಿನವರು, ವೈಯಕ್ತಿಕವಾಗಿ ಅನೇಕರು ಸಹಾಯ ಮಾಡುತ್ತಿದ್ದಾರೆ.
ಮಕ್ಕಳಿಗೆ ಉಳಿದುಕೊಳ್ಳಲು ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯವರು ವ್ಯವಸ್ಥೆ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ವಿಶೇಷ ಕಾಳಜಿ ವಹಿಸಿ ಜಿಲ್ಲಾಡಳಿತದಿಂದ ಬೇಕಾದ ಸೌಲಭ್ಯಗಳು ಒದಗಿಸುತ್ತಿದ್ದಾರೆ ಎಂದು ಸಜ್ಜನ್ ವಿವರಿಸಿದರು.