ಯಾದಗಿರಿ | ಜಿಲ್ಲಾಡಳಿತದ ನಿಷೇಧದ ನಡುವೆಯೂ ಪಲ್ಲಕ್ಕಿ ಮೇಲೆ ಕುರಿಮರಿ ಎಸೆತ
ಯಾದಗಿ ರಿ: ಜಿಲ್ಲಾಡಳಿತ ಹೇರಿರುವ ನಿಷೇಧದ ನಡುವೆಯೂ ಮಂಗಳವಾರ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಕುರಿಮರಿಗಳನ್ನು ಎಸೆದು ತಮ್ಮ ಹರಕೆಯನ್ನು ತೀರಿಸಿದ ಘಟನೆ ಯಾದಗಿರಿ ತಾಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಈ ಘಟನೆ ನಡೆದಿದೆ.
ದೇವರ ಹೆಸರಿನಲ್ಲಿ ನಡೆಯುವ ಮೌಡ್ಯದ ಬಹಳಷ್ಟು ಆಚರಣೆ ಹಾಗೂ ಪ್ರಾಣಿ ಹಿಂಸೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕುರಿಮರಿಗಳನ್ನು ಹಾರಿಸದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿತ್ತು. ಆದರೂ ಅಧಿಕಾರಿಗಳ ಕಣ್ಣುತಪ್ಪಿಸಿ ಇಲ್ಲಿನ ಭಕ್ತರು ಕುರಿಮರಿ ಹಾರಿಸಿದ್ದಾರೆ.
ಕುರಿಮರಿಗಳ ಮೇಲೆ ತೀವ್ರ ನಿಗಾ ವಹಿಸಿದ್ದ ಜಿಲ್ಲಾಡಳಿತ, ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನಕ್ಕೆ ತೆರಳುವ ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಎರಡು ಮೂರು ದಿನಗಳ ಮುಂಚೆಯೇ ಚೆಕ್ಪೋಸ್ಟ್ಗಳನ್ನು ಇಲ್ಲಿ ಸ್ಥಾಪಿಸಲಾಗಿತ್ತು.
ಈ ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜೊತೆಗೆ ಕಂದಾಯ, ಪಶು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು. ಆದರೆ ಅದು ಸಂಪೂರ್ಣವಾಗಿ ವಿಫಲವಾಗಿದೆ.
ಹೊರ ರಾಜ್ಯಗಳಿಂದ ಮತ್ತು ಪಕ್ಕದ ಜಿಲ್ಲೆಗಳಿಂದ ಭಕ್ತರು ಬರುವ ಪ್ರತಿ ವಾಹವನ್ನು ತಪಾಸಣೆ ಮಾಡಿ ಕುರಿ ಮರಿಗಳು ಕಂಡು ಬಂದಲ್ಲಿ ಅವುಗಳನ್ನು ವಶಕ್ಕೆ ಪಡೆದು ಪೋಷಣಾ ಕೇಂದ್ರಕ್ಕೆ ಕಳುಹಿಸಿ ಸೂಕ್ತ ಆರೈಕೆ ಮಾಡಲಾಗುತ್ತಿದೆ. ಇಷ್ಟೆಲ್ಲಾ ಸಿದ್ಧತೆಯ ಮಧ್ಯೆಯೂ ಭಕ್ತರು ಕುರಿಮರಿಗಳನ್ನು ಪಲ್ಲಕ್ಕಿಯ ಮೇಲೆ ಹಾರಿಸಿದ್ದು, ಜಿಲ್ಲಾಡಳಿತಕ್ಕೆ ಸದ್ಯ ನುಂಗಲಾರದ ತುತ್ತಾಗಿದೆ.