ಯಾದಗಿರಿ | ಮಕ್ಕಳಿಗೆ ತಪ್ಪದೇ ಅಲ್ಬೆಂಡಜೋಲ್ ಮಾತ್ರೆ ಕೊಡಿಸಿ : ಎಡಿಸಿ ಕೋಟೆಪ್ಪಗೋಳ

Update: 2024-12-06 13:27 GMT

ಯಾದಗಿರಿ : ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಇದೇ ಡಿ.9 ರಿಂದ ಅಲ್ಬೆಂಡಜೋಲ್ ಮಾತ್ರೆಯನ್ನು 1 ರಿಂದ19 ವಯೋಮಾನದ ಮಕ್ಕಳಿಗೆ ನೀಡಲಾಗುತ್ತಿದ್ದು, ತಪ್ಪದೇ ಈ ಮಾತ್ರೆ ಪಡೆಯುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಪಾಲಕರಿಗೆ ಅಪಾರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದ ಜಿಲ್ಲಾ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು, ಈ ಕಾರ್ಯಕ್ರಮದಲ್ಲಿ ಯಾವುದೇ ಮಗು ಈ ಮಾತ್ರೆಗಳಿಂದ ವಂಚಿತರಾಗದಂತೆ ನಿಗಾವಹಿಸಿ ಶೇ.100 ರಷ್ಟು ಗುರಿ ಸಾಧಿಸಲು ಸೂಚನೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಮನೆ ಮನೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು , ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಸಿ.ಹೆಚ್ಓ ಗಳು ಭೇಟಿ ನೀಡಲಿದ್ದು,ಎಲ್ಲ ಹಂತದ ವೈದ್ಯಾಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮಲ್ಲಪ್ಪ ಕೆ. ಅವರು, ಎರಡನೇ ಹಂತದ ರಾಷ್ಟೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಬಗ್ಗೆ ವಿವರವಾಗಿ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ದಿನಾಂಕ ಡಿ.9 ರಿಂದ ರಾಷ್ಟ್ರಿಯ ಜಂತು ಹುಳು ನಿವಾರಣಾ ಕಾರ್ಯಕ್ರಮದ ಎರಡನೇ ಹಂತವನ್ನು ಪ್ರಾರಂಭಿಸುತ್ತಿದ್ದು, ಜಿಲ್ಲೆಯಲ್ಲಿ ಮಕ್ಕಳ ಗುರಿಯು ಒಟ್ಟು 5,13,173 ಇದ್ದು, ಎಲ್ಲ ಮಕ್ಕಳೂ ಕಡ್ಡಾಯವಾಗಿ Albendozel ಮಾತ್ರೆಗಳನ್ನು ಸೇವಿಸುವುದು ಮಕ್ಕಳ ಆರೋಗ್ಯಕ್ಕೆ ಅತಿ ಅವಶ್ಯಕವಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಾಲೆಯ ಶಿಕ್ಷಕರು ತಮ್ಮ ಶಾಲೆಗಳ ಮಕ್ಕಳಿಗೆ ಕಡ್ಡಾಯವಾಗಿ ಜಂತು ಹುಳು ನಿವಾರಣಾ ಮಾತ್ರೆಯನ್ನು ಸೇವಿಸಲು ಮನ ಒಲಿಸುವಂತೆ ಮಾನ್ಯ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಬಿರಾದರ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಶಾಲಾ, ಕಾಲೇಜು ಮಕ್ಕಳಿಗೆ ಕಡ್ಡಾಯವಾಗಿ ಡಿ.9 ರಂದು ಜಂತು ಹುಳು ಮಾತ್ರೆಯನ್ನು ಸೇವಿಸಲು ಸಲಹೆ ನೀಡಿದರು.

ಸಭೆಯಲ್ಲಿ ಡಿಹೆಚ್ಓ ಡಾ.ಮಹೇಶ ಬಿರಾದಾರ್, ಸರ್ಜನ್ ಡಾ.ರಿಜವಾನಾ ಆಫ್ರೀನ್, ಕ್ಷಯರೋಗ ನಿಯಂತ್ರಣ ಅಧಿಕಾರಿ ಸಂಜಯ್ ರಾಯಚೂರಕರ್, ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್, ಡಾ.ಸಂದೀಪ್ ಪಾಟೀಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News