ಯಾದಗಿರಿ | ಕನಕದಾಸ ಜಯಂತಿ ಆಚರಣೆ
ಯಾದಗಿರಿ : ರಾಯಚೂರು ಹಾಗೂ ಯಾದಗಿರಿ ಪ್ರದೇಶಗಳಲ್ಲಿ ಹಾದು ಹೋಗುವ ಕೃಷ್ಣ ಹಾಗೂ ಭೀಮಾ ನದಿ ತೀರದ "ದೋಅಬ್ ಪ್ರದೇಶ"ದಲ್ಲಿ ಸಂತ ಕವಿ ಕನಕದಾಸರಿಗೆ ಜ್ಞಾನೋದಯವಾದ ಹಿನ್ನೆಲೆಯಲ್ಲಿ, ಈ "ದೋಅಬ್ ಪ್ರದೇಶ"ವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ತಿಂಥಿಣಿ ಕನಕಗುರು ಪೀಠದ ಸಿದ್ದರಾಮಾನಂದ ತೀರ್ಥರು ಹೇಳಿದ್ದಾರೆ.
ನಗರದ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸಂತ ಕವಿ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತಿಯ ಪ್ರತೀಕರಾಗಿದ್ದ ಭಕ್ತ ಕನಕದಾಸರು, ತ್ಯಾಗಮಯಿಯಾಗಿದ್ದರು. ತಮ್ಮ ಕುಟುಂಬ, ಅಧಿಕಾರ ಕಳೆದುಕೊಂಡು ಭಕ್ತಿ ಕಡೆಗೆ ಒಲಿದು ಸಮಾಜ ಸುಧಾರಣೆ, ಧಾರ್ಮಿಕ ಸಮನ್ವಯತೆಗೆ ಒತ್ತು ನೀಡಿದರು. ಶೈವ- ವೈಷ್ಣವಗಿಂತ ದೈವ ಸೇವೆಗೆ ಮಹತ್ವ ನೀಡಿದರು. ಭಕ್ತಿ ಹಾಗೂ ಜ್ಞಾನ ಸಂಪ್ರದಾಯ ಎರಡೂ ಜೀವನದಲ್ಲಿ ಯಶಸ್ವಿಯಾಗಲು ಬೇಕಾಗಿವೆ ಎಂದು ಪ್ರತಿಪಾದಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನ್ಮಭೂಮಿ ಸೇವಾ ಸಂಸ್ಥೆಯ ಅಧ್ಯಕ್ಷ ಬೀರಲಿಂಗಪ್ಪ ಕಿಲ್ಲನಕೇರಾ, ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಸಂತಕವಿ ಕನಕದಾಸರ ಜಯಂತ್ಯೋತ್ಸವ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಣ್ಣ ಐಕೂರ, ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ,ಜಿ.ಪಂ.ಸಿಇಓ ಲವೀಶ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಮಾಲಿಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಉಪಸ್ಥಿತರಿದ್ದರು.