ಯಾದಗಿರಿ | ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ
ಯಾದಗಿರಿ : ರಾಜ್ಯದ್ಯಂತ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳ ಕುರಿತು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪೂರ ಅವರು, ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾ೦ಗ್ರೆಸ್ ಸರ್ಕಾರ ಆತ್ಮಹತ್ಯೆ ಮತ್ತು ಹತ್ಯೆ ಭಾಗ್ಯವನ್ನು ಕರ್ನಾಟಕ ಜನತೆಗೆ ನೀಡಿದೆ. ಕರ್ನಾಟಕದಲ್ಲಿ ಕಳೆದ 19 ತಿಂಗಳಲ್ಲಿ ಆರು ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯವನ್ನು ಈ ಸರ್ಕಾರ ಕರುಣಿಸಿದೆ ಎಂದರು.
ನಿಕಟಪುರ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸರ್ಕಾರದ ಹೊಣೆಗೇಡಿತನದಿ೦ದ ಸ೦ಪೂರ್ಣ ಹದಗೆಟ್ಟಿದೆ. ಸಿಬ್ಬಂದಿಗಳ ಕೊರತೆಯಿ೦ದ ಸೊರಗುತ್ತಿವೆ. ಅಂಬುಲೆನ್ಸ್ ಗಳಿಗೆ ಸರಿಯಾಗಿ ಡೀಸೆಲ್ ಸಿಗುತ್ತಿಲ್ಲ, ಅ೦ಬುಲೆನ್ಸ್ ಡ್ರೈವರ್ ಗಳಿಗೆ ಸರ್ಕಾರ ಸಂಬಳ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ಬ್ಲಡ್ ಬ್ಯಾ೦ಕ್ ಕೊರತೆ ಇದೆ. ಸರ್ಕಾರ ಎಲ್ಲಾ ಪ್ರಾಥಮಿಕ ಆರೋಗ್ಯ ಕೇ೦ದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಪರಿಶೀಲಿಸಿ ಸುವ್ಯವಸ್ಥಿತಗೊಳಿಸಬೇಕು ಹಾಗೂ ಮೇಲ್ಜರ್ಜೆಗೇರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ವೀಣಾ ಮೋದಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷೆ ಭೀಮಬಾಮಿ ಶೇಂಡಿಗಿ, ಶಕುಂತಲಾ ಗುಜ್ಜಲೂರು, ನಗರಸಭೆ ಉಪಾಧ್ಯಕ್ಷೆ ರುಕೀಯ ಬೇಗಂ, ನಗರಸಭೆ ಸದಸ್ಯೆ ಪ್ರಭಾವತಿ ಕಲಾಲ ಮತ್ತು ವಿಜಯಲಕ್ಷ್ಮಿ ನಾಯಕ, ಸಾಬಣ್ಣ ನಾಯಕ, ಆಶಾ ರಾಜು, ಬಾಲ್ಲಮ್ಮ, ಮಮತಾ ಜಾದವ, ಮುನಿ ಬೇಗಂ, ಅನಿಲ್ ಕರಾಟೆ ಸೇರಿದಂತೆ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿದ್ದರು.