ಯಾದಗಿರಿ | ಗ್ರಾಮೀಣ ಭಾಗದ ರೈತಾಪಿ ವರ್ಗ ಆರ್ಥಿಕ ಸ್ವಾವಲಂಬಿಗಳಾಗಲು ಯತ್ನಿಸಿ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್
ಯಾದಗಿರಿ: ಗ್ರಾಮೀಣ ಭಾಗದ ರೈತಾಪಿ ವರ್ಗ ಆರ್ಥಿಕ ಸ್ವಾವಲಂಬಿಗಳಾಗಲು ಕೃಷಿಯೊಂದಿಗೆ ಇನ್ನಿತರ ಉಪ ಕಸುಬುಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್ ಕರೆ ನೀಡಿದರು.
ಮಂಗಳವಾರ ನಗರದ ಶಾಸಕರ ಜನ ಸಂಪರ್ಕ ಕಾರ್ಯಾಲಯದಲ್ಲಿ ತಾಲೂಕು ಕೃಷಿ ಇಲಾಖೆಯ ವಿಶ್ವ ಬ್ಯಾಂಕ್ ನ ರಿವಾರ್ಡ್ ಯೋಜನೆಯಡಿ ಮತಕ್ಷೇತ್ರದ ಫಲಾನುಭವಿಗಳಿಗೆ ಮೇಕೆ ಮರಿಗಳನ್ನು ವಿತರಿಸಿ ಮಾತನಾಡಿದ ಅವರು, ಇಂದು ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಬೆಳೆದ ಬೆಳೆಗಳು ಕೈಗೆ ಬರದೆ ಸಾಕಷ್ಟು ತೊಂದರೆ ಎದುರಿಸುವಂತಾಗಿದೆ ಎಂದರು.
ಹೀಗಾಗಿ ಅನ್ನದಾತರು ಕೃಷಿಯ ಜತೆಗೆ ಮೇಕೆ, ಕುರಿ ಸಾಕಣೆ ಹಾಗೂ ಹೈನೋದ್ಯಮದತ್ತ ಹೆಚ್ಚಿನ ಚಿತ್ತ ಹರಿಸಬೇಕಿದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇಕೆ ಮತ್ತು ಕುರಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದು, ರೈತರು ಆರ್ಥಿಕ ಪುನಶ್ಚೇತನಗೊಳ್ಳಲು ಉತ್ತಮ ಅವಕಾಶಗಳಿವೆ ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ಸಹಾಯಕ ಅಧಿಕಾರಿ ಯಾಮರಡ್ಡಿ ಮುಂಡಾಸ್, ಸಹಾಯಕ ನಿರ್ದೇಶಕ ಸುರೇಶ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಸೋಮಶೇಖರ ಮಸ್ಕನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಈಟೆ, ಸಾಹೇಬ ರೆಡ್ಡಿ ಹಾಲಗೇರ, ಮಲ್ಲಣ್ಣ ಗೌಡ ಗೌಡರೆಡ್ಡಿ,ಶರಣ ಗೌಡ ಬಲ್ಕಲ್, ಇನ್ನಿತರರು ಇದ್ದರು.