ಯಾದಗಿರಿ | ಜಗಜೀವನರಾಂ, ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆಗೆ ನಿರ್ಧಾರ

ಯಾದಗಿರಿ : ಜಿಲ್ಲೆಯಲ್ಲಿ ಏ.5ರಂದು ಆಚರಿಸಲ್ಪಡುವ ಡಾ.ಬಾಬು ಜಗಜೀವನರಾಂ ಅವರ 118ನೇ ಜಯಂತಿ ಹಾಗೂ ಏ.14ರಂದು ಆಚರಿಸಲ್ಪಡುವ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರ ಅಧ್ಯಕ್ಷತೆಯಲ್ಲಿ ಇಂದು ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಕುರಿತ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಏ.5ರ ಬೆಳಿಗ್ಗೆ 11ಗಂಟೆಗೆ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 118ನೇ ಜನ್ಮ ದಿನಾಚರಣೆಯನ್ನು ನಗರದ ಡಾ.ಬಾಬು ಜಗಜೀವನರಾಂ ಸಭಾಂಗಣದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಸಭಾಂಗಣದ ಸುಸ್ಥಿತಿ ಕುರಿತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಿದರು.
ಅಂದು ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶಿಷ್ಟಾಚಾರ ದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಲು, ವೇದಿಕೆ, ಆಹ್ವಾನ ಪತ್ರಿಕೆ, ವೇದಿಕೆ ಸಿದ್ದತೆ ಮಾಡಿಕೊಳ್ಳುವಂತೆ ಹಾಗೂ ನುರಿತ ಉಪನ್ಯಾಸಕರನ್ನು ಆಹ್ವಾನಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ, ಸಾಧಕರಿಗೆ, ಗಣನೀಯ ಸಮಾಜ ಸೇವೆ ಸಲ್ಲಿಸಿದ ಐವರನ್ನು ಆಯ್ಕೆ ಮಾಡಿ ಸನ್ಮಾನಿಸಲು ಜಿ.ಪಂ ಸಿಇಓ ಹಾಗೂ ಜಯಂತ್ಯೋತ್ಸವ ಸಮಿತಿ ಇಬ್ಬರು ಸದಸ್ಯರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಲಿದೆ. ಮೆರವಣಿಗೆ ಕುರಿತು ಮುಂಚಿತವಾಗಿ ತಿಳಿಸಬೇಕು ಎಂದರು.
ಜಿಲ್ಲಾ ,ಗ್ರಾಮ ಪಂಚಾಯತ್, ತಾಲೂಕು ಮಟ್ಟ ಹಾಗೂ ಶಾಲಾ, ಕಾಲೇಜು, ಕಚೇರಿಯಲ್ಲಿ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ಏ.14ರಂದು ಅದ್ದೂರಿಯಾಗಿ ಆಚರಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಬೆಳಿಗ್ಗೆ 11ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಕಳೆದ ಎರಡು ವರ್ಷಗಳಲ್ಲಿ ಲೋಕಸಭಾ, ವಿಧಾನ ಸಭಾ ಚುನಾವಣೆ ಗಳ ಹಿನ್ನೆಲೆಯಲ್ಲಿ ಈ ಇಬ್ಬರೂ ಮಹನೀಯರ ಜಯಂತಿ ಸರಳವಾಗಿ ಆಚರಿಸಲಾಗಿದೆ. ಈ ಬಾರಿ ಕಾರ್ಯಕ್ರಮವು ಶಿಸ್ತುಬದ್ದವಾಗಿ ನಡೆಯಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಆಯಾ ಜಯಂತಿ ದಿನ ಅಥವಾ ನಂತರದ ಮೆರವಣಿಗೆಗಳ ಕುರಿತು ಮುಂಚಿತವಾಗಿ ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅಲ್ಲದೆ ಜಗಜೀವನರಾಂ ಮತ್ತು ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಲು ಉತ್ತಮ ಉಪನ್ಯಾಸಕರನ್ನು ಆಹ್ವಾನಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ, ವೇದಿಕೆ ನಿರ್ಮಾಣ, ಅಲಂಕಾರ ಸೇರಿದಂತೆ ಇತರೆ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಿರಬೇಕು. ಅಲ್ಲದೆ ಉತ್ತಮವಾಗಿ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ನಿರ್ಧರಿಸಲಾಗಿದ್ದು, ಸಮಿತಿ ಮೂಲಕ ಆಯ್ಕೆ ನಡೆಸಲು ಸೂಚಿಸಿದರು.
ಜಿಲ್ಲೆಯ ಎಲ್ಲ ತಾಲೂಕು ಕಚೇರಿ, ಶಾಲಾ-ಕಾಲೇಜು, ಗ್ರಾಮ ಪಂಚಾಯತ್ ಹಾಗೂ ಇತರೆ ಕಚೇರಿಗಳಲ್ಲಿ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಡ್ಡಾಯವಾಗಿ ಆಚರಿಸಲು ನಿರ್ದೇಶನ ನೀಡಲಾಯಿತು. ಡಾ.ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಶಾಲಾ, ಕಾಲೇಜು ಹಂತದಲ್ಲಿ ಭಾಷಣ, ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಯಂತಿಯಂದು ಸೂಕ್ತ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ, ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ , ಡಾ.ಬಾಬು ಜಗಜೀವನರಾಂ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ನಿಂಗಪ್ಪ ಹತ್ತಿಮನಿ, ಮರೆಯಪ್ಪ ಚಟ್ಟೇರಕರ್, ಭೀಮಾಶಂಕರ್, ಹನುಮಂತ ಲಿಂಗೇರಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ನರೇಂದ್ರ ಅನ್ವರ್, ಭಗವಂತ್ ಅನ್ವರ್, ಶ್ರೀಕಾಂತ, ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.