ಯಾದಗಿರಿ | ಭೂಮಿಯನ್ನು ಸರಕಾರಿ ಬೆಲೆಯಲ್ಲಿ ಖರೀದಿಸಿ ವಿಕಲಚೇತನರಿಗೆ ನಿವೇಶನ ಹಂಚಿಕೆ ; ಜೀವನ ಕಟ್ಟಿಮನಿ

ಸುರಪುರ : ನಗರಸಭೆ ವ್ಯಾಪ್ತಿಯ ಒಳಗಡೆ ಇರುವ ಭೂಮಿಯನ್ನು ಸರಕಾರಿ ಬೆಲೆಯಲ್ಲಿ ನೀಡಿದರೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಖರೀದಿಸಿ ವಿಕಲಚೇತನರಿಗೆ ಶೇ.5ರಷ್ಟು ಮೀಸಲಿನಡಿ ನಿವೇಶನ ಹಂಚಿಕೆ ಮಾಡಿಕೊಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಡೆದ ವಿಕಲಚೇತನರ ಸಮನ್ವಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರಸಭೆಗೆ 31 ವಾರ್ಡ್ ಗಳಲ್ಲಿರುವ ವಿಕಲಚೇತನರ ಸಂಪೂರ್ಣ ಮಾಹಿತಿಯಿರಬೇಕು. ಇದನ್ನು ಸಂಗ್ರಹಿಸಿ ನೀಡದಿದ್ದರೆ ಜಿಲ್ಲಾಧಿಕಾರಿಗೆ ಕ್ರಮಕ್ಕಾಗಿ ಪತ್ರ ಬರೆಯಲಾಗುವುದು ಎಂಬುದಾಗಿ ಅಂಗವಿಕಲರ ಡಾಟಾ ಸಂಗ್ರಹಿಸುವವರಿಗೆ ಎಚ್ಚರಿಕೆ ನೀಡಿದರು.
ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ರ‍್ಯಾಂಪ್ ಮಾಡಲಾಗುವುದು. ಅಂಗವಿಕಲರಿಗೆ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಅನರ್ಹ ಅಂಗವಿಕಲರು ಸರಕಾರಿ ಸೌಲಭ್ಯ ಪಡೆಯುತ್ತಿರುವ ಮನವಿಗಳು ಬಂದಿವೆ. ಇದನ್ನು ತೊಡೆದು ಹಾಕಲು ಶೀಘ್ರದಲ್ಲೇ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ಕರೆದು ಅರ್ಹ ಅಂಗವಿಕಲರ ಪಟ್ಟಿ ಮಾಡಲಾಗುವುದು. ಶೇ.75ರಷ್ಟು ಅಂಗವಿಕಲರ ದಾಖಲಾತಿ ಪರಿಶೀಲಿಸಿ ಪ್ರತಿ ತಿಂಗಳು 1,400 ರೂ. ಬರುವಂತೆ ತಹಶೀಲ್ದಾರರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಸಮನ್ವಯ ಸಂಘಟನಾಧಿಕಾರಿ ತಿಪ್ಪಮ್ಮ ಬಿರದಾರ ಮಾತನಾಡಿ, ಅಂಗವಿಕಲರಿಗೆ ಶೇ.5ರಷ್ಟು ಅನುದಾನ ಲಭ್ಯವಿದೆ. ಅದರ ಜತೆಗೆ ಹಲವಾರು ಯೋಜನೆಗಳಿದ್ದು, ಅವುಗಳ ಸೇವೆಯನ್ನು ಒದಗಿಸಿಕೊಡಲಾಗುವುದು ಎಂದರು.
ಜಿಲ್ಲಾ ಎಪಿಡಿ ಸಂಸ್ಥೆಯ ಅಧಿಕಾರಿ ಗಿರೀಶ ಕುಲಕರ್ಣಿ ಮಾತನಾಡಿ, ಸಂಸ್ಥೆ ವತಿಯಿಂದ 3 ಲಕ್ಷ ಅಂಗವಿಕಲರಿಗೆ ಸಹಾಯ ಮಾಡಲಾಗಿದೆ. ಅಂಗವಿಕಲರಿಗೆ ಆರೈಕೆ ಭತ್ಯೆ, ಶೌಚಾಲಯಕ್ಕೆ ರ‍್ಯಾಂಪ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸಾಲಸೌಲಭ್ಯ ಸೇರಿದಂತೆ ವಿವಿಧ ಸಹಕಾರಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಶರಣಪ್ಪ ಬಡಿಗೇರಾ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಗೀತಾ ಸ್ವಾಗತಿಸಿದರು. ಸಮನ್ವಯ ಸಂಘಟನಾಧಿಕಾರಿ ದುರ್ಗಪ್ಪ ನಾಯಕ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿ ಸುವರ್ಣ ವಂದಿಸಿದರು.
ಎಇಇ ಶಾಂತಪ್ಪ ಹೊಸೂರ, ನಗರಸಭೆ ನಿರ್ವಾಹಕ ಯಲ್ಲಪ್ಪ ನಾಯಕ, ಆರೋಗ್ಯ ಅಧಿಕಾರಿ ಗುರುಸ್ವಾಮಿ, ಮಹೇಶ, ಮಾಳಪ್ಪ, ಪರಶುರಾಮ, ನಿಂಗಯ್ಯ, ಬಸವಯ್ಯ, ಲಕ್ಷ್ಮೀ, ಯುಆರ್‌ಡಬ್ಲ್ಯೂಂ ಜರೀನಾ ಬೇಗಂ, ಸಿಆರ್‌ಪಿಗಳಾದ ಶ್ರೀದೇವಿ, ಬಸಮ್ಮ, ಮೈನುದ್ದೀನ್ ಸೇರಿದಂತೆ ಇತರರಿದ್ದರು.