‘ಅಡ್ವೊಕೇಟ್ಸ್ ಕಪ್ -2024: ವಕೀಲರ ರಾಜ್ಯಮಟ್ಟದ ಕ್ರಿಕೆಟ್‌ನಲ್ಲಿ ಡ್ರೀಮ್ ಇಲೆವೆನ್ ಬೆಂಗಳೂರು, ಥ್ರೋಬಾಲ್‌ನಲ್ಲಿ ಮಂಗಳೂರು ಎ ಚಾಂಪಿಯನ್
ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹಕ್ಕೊತ್ತಾಯದೊಂದಿಗೆ ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ‘ಅಡ್ವೊಕೇಟ್ಸ್ ಕಪ್ -2024’ ವಕೀಲರ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಡ್ರೀಮ್ ಇಲೆವೆನ್ ಬೆಂಗಳೂರು ತಂಡ ಮತ್ತು ಥ್ರೋಬಾಲ್‌ನಲ್ಲಿ ಮಂಗಳೂರು ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನೆಹರೂ ಮೈದಾನದಲ್ಲಿ ರವಿವಾರ ರಾತ್ರಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಡ್ರೀಮ್ ಇಲೆವೆನ್ ಬೆಂಗಳೂರು ತಂಡವು ಜಮಖಂಡಿ ಬಾಗಲಕೋಟೆ ತಂಡವನ್ನು ಮಣಿಸಿ 1 ಲಕ್ಷ ರೂ. ಮೊತ್ತದ ನಗದು ಪ್ರಶಸ್ತಿ ಯೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನ ಪಡೆದ ಜಮಖಂಡಿ ಬಾಗಲಕೋಟೆ ತಂಡ 50 ಸಾವಿರ ರೂ. ನಗದು ಮತ್ತು ಬೆಂಗಳೂರು ಅಟ್ಯಾಕರ್ಸ್ ತೃತೀಯ ಸ್ಥಾನ ಬಹುಮಾನ ಪಡೆಯಿತು.
ಮ್ಯಾನ್ ಆಫ್ ದಿ ಮ್ಯಾಚ್ :ರವಿ ಪ್ರಕಾಶ್ (ಡ್ರೀಮ್ ಇಲೆವೆನ್ ಬೆಂಗಳೂರು), ಸರಣಿ ಶ್ರೇಷ್ಠ :ಆಕಾಶ್ (ಜಮಕಂಡಿ), ಅತ್ಯುತ್ತಮ ಬೌಲರ್:ಜಗದೀಶ್ (ಹೊಸಕೋಟೆ), ಬೆಸ್ಟ್ ಕೀಪರ್: ಗಣೇಶ್ (ಮಂಗಳೂರು ಎ), ಅತ್ಯುತ್ತಮ ಡಿಸಿಪ್ಲಿನರಿ ತಂಡ:ಜಮಖಂಡಿ
ಅತ್ಯಂತ ಮೌಲ್ಯಯುತ ಆಟಗಾರ:ಗುಣಶೇಖರ (ಡ್ರೀಮ್ ಇಲೆವೆನ್) ಪಡೆದರು.
ಆತಿಥೇಯ ಮಂಗಳೂರು ಎ ತಂಡವು ಥ್ರೋಬಾಲ್‌ನ ಫೈನಲ್‌ನಲ್ಲಿ ಹಾಸನ ತಂಡವನ್ನು ಮಣಿಸಿ 1 ಲಕ್ಷ ರೂ. ಮೊತ್ತದ ಪ್ರಶಸ್ತಿಯನ್ನು ತನ್ನದಾಗಿಸಿತು. ಹಾಸನ ಎರಡನೇ ಸ್ಥಾನದೊಂದಿಗೆ 50 ಸಾವಿರ ಮೊತ್ತದ ನಗದು ಬಹುಮಾನ ಪಡೆಯಿತು. ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಉಡುಪಿಗೆ ಶಿಸ್ತಿನ ತಂಡ ಪ್ರಶಸ್ತಿ ಒಲಿಯಿತು.
ಕ್ರಿಕೆಟ್ ಮತ್ತು ಥ್ರೋಬಾಲ್‌ನಲ್ಲಿ ತೃತೀಯ ಸ್ಥಾನ ಪಡೆದ ತಂಡಗಳಿಗೆ ತಲಾ 25 ಸಾವಿರ ರೂ. ನಗದು ಬಹುಮಾನ ದೊರೆಯಿತು. ಆಲ್‌ರೌಂಡರ್ ರೋಶನಿ (ಹಾಸನ), ಬೆಸ್ಟ್ ರಿಸೀವರ್ ನೆಸ್ಲೈನ್ ಪ್ರಿಯಾ (ಮಂಗಳೂರು ಎ), ಅತ್ಯುತ್ತಮ ಎಸೆತಗಾರ್ತಿ ಪ್ರಶಸ್ತಿಯನ್ನು ಸುಹಾನಿ (ಮಂಗಳೂರು ಎ) ಪಡೆದರು.
ಬೆಂಗಳೂರಿನ ಹೈಕೋರ್ಟ್ ವಕೀಲರಾದ ಕಮಾಲುದ್ದೀನ್ ಅಹಮ್ಮದ್ ಮತ್ತು ಪಿ.ಪಿ. ಹೆಗ್ಡೆ ಪ್ರಶಸ್ತಿ ವಿತರಿಸಿದರು. ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ, ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯು.ಟಿ ಇಫ್ತಿಕರ್ ಅಲಿ, ಉದ್ಯಮಿ ಪ್ರಕಾಶ್ ಪಿಂಟೊ, ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಉಪಾಧ್ಯಕ್ಷ ಸುಜೀತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್, ಕೋಶಾಧಿಕಾರಿ ಗಿರೀಶ್ ಶೆಟ್ಟಿ ಎ, ಜೊತೆ ಕಾರ್ಯದರ್ಶಿ ಜ್ಯೋತಿ, ಕ್ರೀಡಾ ಕೂಟದ ವಿವಿಧ ಸಮಿತಿಯ ಸಂಚಾಲಕರಾದ ಅಶೋಕ್ ಅರಿಗ, ನರಸಿಂಹ ಹೆಗ್ಡೆ, ಜೀನೇಂದ್ರ ಕುಮಾರ್, ಪ್ರಥ್ವಿರಾಜ್ ರೈ, ಶ್ರೀಧರ್ ಎಣ್ಮಕಜೆ , ಸಹ ಸಂಚಾಲಕ ಜಗದೀಶ್ ಕೆ.ಶೇಣವ ಉಪಸ್ಥಿತರಿದ್ದರು.