ಉಪ್ಪಿನಂಗಡಿ| ಕುಡಿದು ಬಸ್ ಚಾಲನೆ ಆರೋಪ: ಚಾಲಕನನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು
Update: 2024-12-16 17:02 GMT
ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಚಾಲಕನೋರ್ವ ಕಂಠಪೂರ್ತಿ ಕುಡಿದು ಯದ್ವಾತದ್ವ ಬಸ್ ಚಲಾಯಿಸಿ ಪ್ರಯಾಣಿಕರನ್ನು ಭಯಭೀತಗೊಳಿಸಿದ ಘಟನೆ ರವಿವಾರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸಿ ಆಲಂತಾಯದತ್ತ ಸಾಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸು ಕೆ ಎ 19 ಎಫ್ 3324 ಅನ್ನು ಆದರ ಚಾಲಕ ಮದ್ಯ ಸೇವಿಸಿ ಚಲಾಯಿಸಿದ್ದನೆನ್ನಲಾಗಿದ್ದು, ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಬಸ್ಸನ್ನು ಮನಸೋ ಇಚ್ಚೆ ಚಲಾಯಿಸಿದ ಪರಿಣಾಮ ಬಸ್ಸಿನಲ್ಲಿದ್ದ ಮಹಿಳೆಯರು, ಮಕ್ಕಳು ಭಯಭೀತರಾಗಿ ಚೀರಾಡತೊಡಗಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರ ಚೀರಾಟವನ್ನು ಕಂಡ ಸ್ಥಳೀಯ ನಾಗರಿಕರು ಬಸ್ಸನ್ನು ನಿಲ್ಲಿಸಲು ಮುಂದಾಗಿ ಬಸ್ಸು ನಿಲ್ಲುತ್ತಿದ್ದಂತೆಯೇ ಚಾಲಕನನ್ನು ಬಸ್ಸಿನಿಂದ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡರು. ಆದಾಗ್ಯೂ ಮದ್ಯದ ಅಮಲಿನಲ್ಲಿ ದೇಹದ ನಿಯಂತ್ರಣ ಕಳೆದುಕೊಂಡು ತೂರಾಡುತ್ತಿದ್ದ ಚಾಲಕನನ್ನು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.