ಮಂಗಳೂರು: ಕಾಲುಬಾಯಿ ರೋಗಕ್ಕೆ 6ನೇ ಸುತ್ತಿನ ಲಸಿಕೆ ಅಭಿಯಾನ ಆರಂಭ

Update: 2024-10-21 17:29 GMT

ಮಂಗಳೂರು: ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ 6ನೇ ಹಂತದ ಲಸಿಕೆ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಆರಂಭಗೊಂಡಿದ್ದು, ನ.20ರ ತನಕ ನಡೆಯಲಿದೆ.

ಜಾನುವಾರು ರೋಗ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ನಡೆಯುವ ಲಸಿಕೆ ಅಭಿಯಾನ ಒಂದು ತಿಂಗಳ ಕಾಲ ಮುಂದುವರಿಯಲಿದೆ.

ಈ ಅಭಿಯಾನದಲ್ಲಿ ಹಸು, ಎತ್ತು, ಎಮ್ಮೆ ಕೋಣಗಳು ಸೇರಿದಂತೆ 2.20 ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲಾಗುವುದು ಎಂದು ದ.ಕ.ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಈ ರೋಗವು ಹಾಲಿನ ಉತ್ಪಾದನೆಯಲ್ಲಿ ಇಳಿಕೆ, ಬಂಜೆತನ ಮತ್ತು ಜಾನುವಾರುಗಳಲ್ಲಿ ಇತರ ಸಮಸ್ಯೆಗಳಿಗೆ ಕಾರಣ ವಾಗುತ್ತದೆ. ಈ ರೋಗವು ಹಾಲು ಉತ್ಪಾದನೆಯಲ್ಲಿ ಕಡಿತ, ಬಂಜೆತನ ಮತ್ತು ಜಾನುವಾರುಗಳಲ್ಲಿ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಹಯೋಗದಲ್ಲಿ ಇಲಾಖೆಯು ಈ ಅಭಿಯಾನವನ್ನು ನಡೆಸುತ್ತಿದೆ. ಪಶುವೈದ್ಯಕೀಯ ವೈದ್ಯರು, ಕೆಎಂಎಫ್‌ನ ಸಿಬ್ಬಂದಿ, ಇನ್‌ಸ್ಪೆಕ್ಟರ್‌ಗಳು ಮತ್ತು ಪಶು ಸಖಿಗಳು ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾನುವಾರುಗಳಲ್ಲಿ ಕಂಡು ಬರುವ ರೋಗಗಳ ನಿರ್ಮೂಲನೆಗೆ ಕೇಂದ್ರ ಸರಕಾರದ ಯೋಜನೆಯಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ 2019ರಿಂದ ರಾಜ್ಯದಲ್ಲಿ ಆರಂಭಗೊಂಡಿತ್ತು.

ಹೊಸ ಜಾನುವಾರು ಗಣತಿ ಕಳೆದ ಸೆಪ್ಟಂಬರ್‌ನಲ್ಲಿ ನಡೆಯಬೇಕಿತ್ತು. ಅದು ಮುಂದಕ್ಕೆ ಹೋಗಿತ್ತು. ಮುಂದಿನ ತಿಂಗಳು ದೇಶಾದ್ಯಂತ ಜಾನುವಾರು ಗಣತಿಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ.

2019ರಲ್ಲಿ ನಡೆದ 20ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ 2,52,401 ಜಾನುವಾರುಗಳಿವೆ. ಬೆಳ್ತಂಗಡಿಯಲ್ಲಿ ಗರಿಷ್ಠ ಜಾನುವಾರುಗಳಿವೆ. ಅಲ್ಲಿನ ಜಾನುವಾರುಗಳ ಸಂಖ್ಯೆ 67,416. ಕಡಬ 42,414, ಪುತ್ತೂರು 25,309, ಸುಳ್ಯ 23,664, ಮಂಗಳೂರು 16, 350, ಮೂಡುಬಿದಿರೆ 19,651, ಉಳ್ಳಾಲ 7,603, ಮೂಲ್ಕಿಯಲ್ಲಿ 7,191 ಜಾನುವಾರುಗಳಿವೆ. 5ನೇ ಸುತ್ತು 2.15 ಲಕ್ಷ ಜಾನುವಾರುಗಳಿಗೆ ಲಸಿಕೆ: ವರ್ಷಕ್ಕೆ ಎರಡು ಬಾರಿ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದ್ದು. ಕಳೆದ ಎಪ್ರಿಲ್‌ನಲ್ಲಿ ನಡೆದ 5ನೇ ಸುತ್ತಿನ ಲಸಿಕೆ ಕಾರ್ಯಕ್ರಮದಲ್ಲಿ 2,15,085 ಜಾನುವಾರು ಗಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಐದನೇ ಸುತ್ತಿನ ವ್ಯಾಕ್ಸಿನೇಷನ್ ಸಮಯದಲ್ಲಿ ಜಿಲ್ಲೆಯಲ್ಲಿ 2,15,085 ಜಾನುವಾರುಗಳು ಇದ್ದವು. ಬೆಳ್ತಂಗಡಿ 53,397, ಕಡಬ 33, 140, ಬಂಟ್ವಾಳ 39,577, ಪುತ್ತೂರು 21,521, ಸುಳ್ಯ 21,929, ಮಂಗಳೂರು 13,770, ಮೂಡುಬಿದಿರೆ 18,324, ಉಳ್ಳಾಲ 7,026, ಮೂಲ್ಕಿಯಲ್ಲಿ 6,401ಜಾನುವಾರುಗಳಿವೆ. 5ನೇ ಸುತ್ತಿನಲ್ಲಿ 11, 037 ಲಸಿಕೆ ಉಳಿಕೆ ಯಾಗಿದೆ. ಬಂಟ್ವಾಳದಲ್ಲಿ ಮಾತ್ರ ವಿತರಿಸಲಾದ ಎಲ್ಲ ಲಸಿಕೆಗಳು ಖಾಲಿಯಾಗಿತ್ತು.

6ನೇ ಸುತ್ತಿನಲ್ಲಿ 2,25,200 ಲಸಿಕೆಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಪೂರೈಸಲಾಗಿದೆ. ಹಿಂದೆ ಉಳಿಕೆಯಾಗಿರುವ ಲಸಿಕೆಗಳು ಸೇರಿದಂತೆ ಒಟ್ಟು 2,36, 237 ಲಸಿಕೆಗಳು ಲಭ್ಯವಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಈ ಲಸಿಕಾ ಅಭಿಯಾನದಲ್ಲಿ ಯಾವುದೇ ಜಾನುವಾರುಗಳು ಹೊರಗುಳಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ಡಾ.ಅರುಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಪಶುಸಂಗೋಪನಾ ಇಲಾಖೆಯ ಸಿಬ್ಬಂದಿಯ ಕೊರತೆ ಇದೆ. ಈ ಕಾರಣಕ್ಕಾಗಿ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್ ಕೆ ಅವರು ಈಗಾಗಲೇ ಜಿಲ್ಲೆಯ ಎಲ್ಲಾ 223 ಗ್ರಾಮ ಪಂಚಾಯತ್‌ಗಳಿಗೆ ಸುತ್ತೋಲೆ ಹೊರಡಿಸಿ ಲಸಿಕಾ ಅಭಿಯಾನಕ್ಕೆ ಗ್ರಾಮ ಪಂಚಾಯತ್‌ನಿಂದ ಸಹಕಾರ ನೀಡುವಂತೆ ತಿಳಿಸಿದ್ದಾರೆ.

ಜಾನುವಾರು ಮಾಲಕರು ಲಸಿಕೆ ಹಾಕುವವರಿಗೆ ತಮ್ಮ ಜಾನುವಾರುಗಳಿಗೆ ಲಸಿಕ ಹಾಕಿಸಿ ಜಾನುವಾರುಗಳನ್ನು ರೋಗ ಮುಕ್ತಗೊಳಿಸಲು ಸಹಕರಿಸುವಂತೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ.







 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News