ಮಂಗಳೂರು ಮೀನುಗಾರಿಕಾ ಧಕ್ಕೆ ಸಮಸ್ಯೆ: ಬಗೆಹರಿಸಲು ಮೀನುಗಾರರ ನಿಯೋಗ ಒತ್ತಾಯ

Update: 2024-10-21 14:09 GMT

ಮಂಗಳೂರು: ನಗರದ ಹಳೆ ಮೀನುಗಾರಿಕಾ ಬಂದರು ಧಕ್ಕೆ ಪ್ರದೇಶದಲ್ಲಿ ಮೀನುಗಾರರು ಎದುರಿಸುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮಂಗಳೂರಿನ ವಿವಿಧ ಮೀನುಗಾರಿಕಾ ಸಂಘಟನೆಗಳ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ಸೋಮವಾರ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಮೀನುಗಾರಿಕಾ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮೀನುಗಾರಿಕೆ, ಬಂದರು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮಸ್ಯೆಗಳನ್ನು ಆಲಿ ಸಿದ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಚುನಾವಣಾ ನೀತಿ ಸಂಹಿತೆ ಕೊನೆಗೊಂಡಾಕ್ಷಣ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ 1500 ಕ್ಕೂ ಹೆಚ್ಚಿನ ಮೀನುಗಾರಿಕಾ ಬೋಟುಗಳು ಇದ್ದರೂ, ಕನಿಷ್ಟ 500 ಬೋಟುಗಳಿಗೆ ಅಗತ್ಯವಿರುವ ಪೂರಕ ವ್ಯವಸ್ಥೆಗಳು ಇಲ್ಲವಾಗಿವೆ.

2023 ನೇ ಸಾಲಿನಲ್ಲಿ 49.50 ಕೋಟಿ ರೂ.ಗಳಿಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದರು, ಕಳೆದೊಂದು ವರ್ಷದಂದ ಟೆಂಡರ್ ಹಂತದಲ್ಲಿರುವ 3 ನೇ ಹಂತದ ಮೀನುಗಾರಿಕಾ ಧಕ್ಕೆ ವಿಸ್ತರಣೆಯ ಉಳಿಕೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ, ಮುಂದಿನ ಒಂದು ವರ್ಷದೊಳಗೆ ಈ ಬಂದರನ್ನು ಮೀನುಗಾರರ ಬಳಕೆಗೆ ಯೋಗ್ಯವನ್ನಾಗಿಸಬೇಕು.

ಬಂದರಿನ 1 ಮತ್ತು 2 ನೇ ಹಂತದ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಯಲ್ಲಿ ಮಂಗಳೂರು ಮೀನಗುರಿಕಾ ಬಂದರಿನ ಆಧುನೀಕರಣದ ಕಾಮಗಾರಿಗೆ ಒಂದು ವರ್ಷದ ಹಿಂದೆಯೇ, 37.50 ಕೋಟಿರೂ. ಅನುಮೋದನೆಗೊಂಡಿರುವುದಾಗಿ ಸ್ಥಳೀಯ ಬಂದರಿನ ಅಧಿಕಾರಿಗಳು ತಿಳಿಸುತ್ತಿದ್ದು, ರಾಜ್ಯ ಸರ್ಕಾರದ ಅನು ಮೋದನೆ ಹಾಗೂ ಸಿ.ಆರ್.ಝಡ್ ಅನುಮತಿ ಬಾಕಿ ಇರುವುದಾಗಿ ಹೇಳುತ್ತಿದ್ದಾರೆ. ಈ ಕಾಮಗಾರಿಯನ್ನು ಶೀಘ್ರ ಪ್ರಾರಂಭಿ ಸಲು ಕ್ರಮ ವಹಿಸಬೇಕು. ಈ ಎರಡು ಕಾಮಗಾರಿಗಳು ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಹಾಲಿ ಬಂದರಿನಲ್ಲಿ ಮೀನು ಗಾರಿಕಾ ಚಟುವಟಿಕೆಗಳನ್ನು ನಡೆಸಲು ತೀರಾ ಕಷ್ಟವಾಗಲಿದ್ದು, ಈ ಯೋಜನೆಗಳು ಮುಕ್ತಾಯಗೊಳ್ಳುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಮೀನುಗಾರಿಕಾ ಬಂದರಿನ ಪಕ್ಕದಲ್ಲಿರುವ ಬಂದರು ಇಲಾಖೆಯ ವಾಣಿಜ್ಯ ದಕ್ಷಿಣ ಧಕ್ಕೆಯ ಕನಿಷ್ಟ 200 ಮೀ ಉದ್ದದ ಜೆಟ್ಟಿಯನ್ನು ಮೀನುಗಾರಿಕಾ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರ ಪಡೆಯಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು.

ಮಂಗಳೂರು ಬಂದರಿನ ಅಳಿವೆ ಭಾಗದಲ್ಲಿ ಪ್ರತೀ ವರ್ಷ ಡ್ರೆಡ್ಜಿಂಗ್ ಸಮಸ್ಯೆ ಇದ್ದು, ಹಲವಾರು ಬೋಟಗಳು ಈ ಭಾಗದಲ್ಲಿ ಮಗುಚಿ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುತ್ತಾರೆ. ಕಳೆದ ಐದಾರು ವರ್ಷಗಳಿಂದಲೂ ಅಧಿಕಾರಿಗಳು 29 ಕೋಟಿಯ ಡ್ರೆಡ್ಜಿಂಗ್ ಪ್ರಾರಂಭವಾಗುವುದಾಗಿ ತಿಳಿಸುತ್ತಲೇ ಇದ್ದರೂ ಈವರೆಗೂ ಈ ಕಾಮಗಾರಿಯೂ ಪ್ರಾರಂಭವಾಗಿಲ್ಲ. ಆದ್ದರಿಂದ ಅಳಿವೆಬಾಗಿಲಿನಲ್ಲಿ ಹೂಳೆತ್ತಲು ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬ್ರೇಕ್ ವಾಟರ್ ಅನ್ನು ವಿಸ್ತರಿಸಲು ಅಧ್ಯಯನ ಕೈಗೊಂಡು ವರದಿ ಪಡೆದು ಶೀಘ್ರ ಇದಕ್ಕೆ ಅನುದಾನ ನೀಡಬೇಕು.

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಪ್ರತಿ ದಿನ 100 ಕೋಟಿಗಳಿಗೂ ಮಿಕ್ಕಿ ವ್ಯವಹಾರ ನಡೆಯುತ್ತಿದ್ದು, ಬಂದರಿ ನಲ್ಲಿ ಮೀನುಗಾರರ ರಕ್ಷಣೆ, ಮಹಿಳಾ ಮೀನುಗಾರರ ಸುರಕ್ಷತೆ, ಕಳ್ಳತನ ಹಾಗೂ ಇನ್ನಿತರ ಕಾನೂನು ಬಾಹಿರ ಚಟು ವಟಿಕೆಗಳು ಹೆಚಚ್ಚಾಗುತ್ತಿದ್ದು, ಇದಕ್ಕೆ ಬಂದರಿನಾದ್ಯಂತ ಸೂಕ್ತ ಸಿ.ಸಿ.ಟಿ.ವಿ. ವ್ಯವಸ್ಥೆ ಹಾಗೂ ನಿರಂತರ ಆರಕ್ಷಕ ಸಿಬ್ಬಂದಿ ಗಳನ್ನು ಬಂದರಿಗೆ ನಿಯೋಜಿಸಲು ಕ್ರಮ ವಹಿಸಬೇಕು.

ರಂಖಂ ಮತ್ತು ಕಮಿಶನ್ ಮೀನು ಮಾರಾಟವನ್ನು ಪ್ರಸ್ತುತ ಮಂಗಳೂರು ಮೀನುಗಾರಿಕಾ ಬಂದರಿನ ಒಳಭಾಗದಲ್ಲೇ ನಡೆಸುತ್ತಾ ಇರುವುದರಿಂದ ಬೇರೇ ರಾಜ್ಯಗಳಿಂದ ಬರುವ 200 ಕ್ಕೂ ಹೆಚ್ಚಿನ ವಾಹನಗಳಿಂದ ಇನ್ನಷ್ಟು ದಟ್ಟಣೆ ಉಂಟಾಗಿ ಬಂದರಿನ ದೈನಂದಿನ ಕಾರ್ಯಚಟುವಟಿಕಗಳಿಗೆ ತೊಡಕಾಗುತ್ತಿದ್ದು, ನಗರದ ಹೊರಭಾಗದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಈ ಮಾರುಕಟ್ಟೆಯನ್ನು ಸ್ಥಳಾಂತರಿಸುವ ಬೇಡಿಕೆಯನ್ನು ಪರಿಗಣಿಸಿ ಕ್ರಮ ವಹಿಸಬೇಕು.

ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಗಣನೀಯವಾಗಿ ಮೀನುಗಾರಿಕಾ ಬೋಟುಗಳು, ಹೆಚ್ಚುತ್ತಿದ್ದರೂ ಜೆಟ್ಟಿ ವಿಸ್ತರಣೆಯ ಯಾವುದೇ ಯೋಜನೆಯು ಅನುಮೋದನೆಗೊಂಡಿರುವುದಿಲ್ಲ. ಆದ್ದರಿಂದ ಈಗ ಕೇಂದ್ರೀಕೃತವಾಗಿರುವ ಮಂಗಳೂರು ಬಂದರಿನ ದಟ್ಟಣೆ ಸಮಸ್ಯೆಗಳನ್ನು ನಿವಾರಿಸಲು ಪ್ರಸ್ತುತ ಮೀನುಗಾರಿಕಾ ಬೋಟುಗಳನ್ನು ಲಂಗರು ಹಾಕುತ್ತಿರುವ ತೋಟ ಬೆಂಗ್ರೆ, ಬೊಕ್ಕಪಟ್ನ ಬೆಂಗ್ರೆ, ಕೋಟೆಪುರ ಜಾಗೆಗಳಲ್ಲಿ ತಲಾ 200 ಮೀ ಉದ್ದದ ಜೆಟ್ಟಿಗಳನ್ನು ಹಾಗೂ ಪೂರಕ ಸೌಲಭ್ಯಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ನಿಯೋಗವು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ಪರ್ಸೀನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕಪಟ್ಣ, ಟ್ರಾಲ್ ಬೋಟ್ ಯೂನಿಯನ್ ಉಪಾಧ್ಯಕ್ಷ ಇಬ್ರಾಹಿಂ ಬೆಂಗ್ರೆ, ಕಾರ್ಯದರ್ಶಿ ರಾಜೇಶ್ ಪುತ್ರನ್, ರಾಷ್ಟ್ರೀಯ ಮೀನುಗಾರರ ಸಂಘಟನೆಯ ಮನೋಹರ್ ಬೋಳೂರು, ಪರ್ಸಿನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News