ಅಧಿಕೃತ ಗುರುತಿನ ಚೀಟಿ ಹೊಂದಿದ್ದ ಬೀಬಿಬದಿ ವ್ಯಾಪಾರಿಗಳ ತೆರವು: ಮನಪಾ ಅಧಿಕಾರಿಗಳ ಕ್ರಮಕ್ಕೆ ವ್ಯಾಪಾರಿಗಳಿಂದ ವಿರೋಧ

Update: 2024-10-21 17:24 GMT

ಸುರತ್ಕಲ್: ನಾಲ್ಕು ದಿನಗಳ ಪಟಾಕಿ ಮಾರಾಟಕ್ಕೆ ಅಂಗಡಿಗಳನ್ನು ನೀಡುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಾನಗರ ಪಾಲಿಕೆಯ ಅಧಿಕೃತ ಗುರುತಿನ ಚೀಟಿ ಹೊಂದಿದ್ದ ಬೀದಿಬದಿ ವ್ಯಾಪಾರಿ ಗಳನ್ನು ಮನಪಾ ಅಧಿಕಾರಿಗಳು ಎಬ್ಬಿಸಿದ್ದಾರೆ ಎನ್ನಲಾದ ಘಟನೆ ಸೋಮವಾರ ಸಂಜೆ ವರದಿಯಾಗಿದೆ.

ರಾಷ್ಟೀಯ ಹೆದ್ದಾರಿ ಪಕ್ಕದ ಬೈಕಂಪಾಡಿ ರೈಲು ಮಾರ್ಗದ ಬಳಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದೆನ್ನ ಲಾದ ಸ್ಥಳದಲ್ಲಿ ಮಹಾ ನಗರಪಾಲಿಕೆ ಗುರುತಿನ ಚೀಟಿ ಪಡೆದುಕೊಂಡವರು ಬೀದಿಬದಿ ವ್ಯಾಪಾರ ನಡೆಸುತ್ತಿದ್ದಾರೆ. ಸೋಮವಾರ ಸಂಜೆ ಏಕಾಏಕಿ ಬಂದ ಮನಪಾ ಅಧಿಕಾರಿಗಳಾದ ಕಂದಾಯ ನಿರೀಕ್ಷಕ ಯಾದವ್, ಕಂದಾಯ ಅಧಿಕಾರಿ ದೇವೆಂದ್ರ ಮೊದಲಾದವರಿದ್ದ ತಂಡ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಸೂಚಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಹೋರಾಟಗಾರ ಬಿ.ಕೆ. ಇಮ್ತಿಯಾಝ್ ಮತ್ತು ವ್ಯಾಪಾರಸ್ಥರು ಇದು ಮಹಾ ನಗರ ಪಾಲಿಕೆಯ ಸ್ಥಳ ಅಲ್ಲ. ಹೌದಾದರೆ ದಾಖಲೆಗಳನ್ನು ನೀಡಿವಂತೆ ಪಟ್ಟು‌ ಹಿಡಿದರು. ಈ ವೇಳೆ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ಸ್ಥಳಕ್ಕೆ ಬಂದ ಸುರತ್ಕಲ್‌ ವಲಯ ಆಯುಕ್ತೆ ವಾಣಿ ಆಳ್ವ ಅವರು ವ್ಯಾಪಾರಿಗಳನ್ನು ತರಾಟಗೆ ತೆಗೆದುಕೊಂಡು ವಹಿವಾಟು ಸ್ಥಗಿತಗೊಳಿಸಿ ಅಂಗಡಿಗಳನ್ನು ತೆರವುಗೊಳಿಸಬೇಕು ಇಲ್ಲವಾದರೆ, ಮನಪಾ ವಾಹನದಲ್ಲಿ ಕೊಂಡು ಹೋಗು ವುದಾಗಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು. ಅದಾಗಲೇ ಭದ್ರತೆ ನೀಡುವ ಸಲುವಾಗಿ ಸ್ಥಳಕ್ಕೆ ಬಂದಿದ್ದ ಪಣಂಬೂರು ಪೊಲೀಸ್‌ ಅಧಿಕಾರಿಯೊಬ್ಬರು ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ನಿವೇಶನ ಎಂದು ವ್ಯಾಪಾರಿಗಳು ಹೇಳು ತ್ತಿದ್ದಾರೆ. ಅಲ್ಲದೆ, ವ್ಯಾಪಾರಕ್ಕಾಗಿ ಮನಪಾದಿಂದ ಅಧಿಕೃತ ಗುರುತಿನ ಚೀಟಿ ಹೊಂದಿರುವವರೇ ಇಲ್ಲಿ ವ್ಯಾಪಾರ ಮಾಡುತ್ತಿ ದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮನಪಾ ನಿವೇಶನ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡು ವಂತೆ ಮನವಿ ಮಾಡಿದರು. ಈ ವೇಳೆ ವಾಣಿ ಆಳ್ವ ಸಾರ್ವಜನಿಕರ ಎದರುರಲ್ಲೇ ಕರ್ತವ್ಯನಿರತ ಪೊಲೀಸ್‌ ಅಧಿಕಾರಿ ಯನ್ನು ನಿಂದಿಸಿದ ಘಟನೆಯೂ ನಡೆಯಿತು. ಬಳಿಕ ಪೊಲೀಸ್‌ ಅಧಿಕಾರಿಗಳ ಮನವಿಯ ಮೇರೆಗೆ ಬೀದಿಬದಿ ವ್ಯಾಪಾರಿ ಗಳು ತಮ್ಮ ಅಂಗಡಿಗಳನ್ನು ತೆರವುಗೊಳಿಸಿದರು.

ಈ ವೇಳೆ ಮಾತನಾಡಿದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್‌, ಬೈಕಂಪಾಡಿ ಎಪಿಎಂಸಿ ಎದುರು ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಮನಪಾ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಅಧಿಕಾರಿಗಳಲ್ಲಿ ಸ್ಪಷ್ಟನೆ ಕೇಳಿದರೆ, ಪಟಾಕಿ ವ್ಯಾಪಾರಕ್ಕಾಗಿ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡುತ್ತಿರುವುದಾಗಿ ಸಬೂಬು ಹೇಳಿದ್ದಾರೆ. ಎರಡು ಮೂರು ದಿನದ ವ್ಯಾಪಾರಕ್ಕೆ ನಮ್ಮ ಬೀಬಿ ವ್ಯಾಪಾರಸ್ಥರಿಂದ ಯಾವುದೇ ವಿರೋಧ ವಿಲ್ಲ. ಬೀಬಿ ಬದಿ ವ್ಯಾಪಾರಿಗಳ ವಲಯ ಎಂದು ಘೋಷಿಸಿರುವ ಪ್ರದೇಶದಲ್ಲಿ ಪಟ್ಟಣ ವ್ಯಾಪಾರಸ್ಥರ ಸಂಘದಿಂದ ಅನುಮೋದಿಸಿರುವ ವ್ಯಾಪಾರಿಗಳನ್ನು ಏಕಾಏಕಿ ದಬ್ಬಾಳಿಕೆ ಮಾಡಿ ಎಬ್ಬಿಸಿರುವುದಕ್ಕೆ ನಮ್ಮ ವಿರೋಧ ಇದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ನಿವೇಶನವನ್ನು ಪಟಾಕಿ ವ್ಯಾಪಾರ ಮಾಡುವುದು ಸರಿಯಾದ ಕ್ರಮವಲ್ಲ. ಇಲ್ಲಿ ಕುಡುಕರ ಹಾವಳಿ, ಇನ್ನೊಂದೆಡೆ ಹೆದ್ದಾರಿಯಲ್ಲಿ ಗ್ಯಾಸ್‌, ಪೆಟ್ರೋಲ್‌, ಡಿಸೇಲ್‌ ನಂತಹಾ ಅತೀ ಸೂಕ್ಷ್ಮ ವಸ್ತುಗಳು ಸರಬ ರಾಜಾಗುತ್ತಿರುವ ಹೆದ್ದಾರಿ ಇದೆ. ಅತೀ ಸೂಕ್ಷ್ಮ ವಸ್ತುಗಳ ಸರಬರಾಜಾಗುತ್ತಿರುವ ಹೆದ್ದಾರಿ ಪಕ್ಕದಲ್ಲಿ ಪಟಾಕಿ ಅಂಗಡಿ ಗಳನ್ನು ಇಡುವುದು ಸರಿಯಾದ ಕ್ರಮವಲ್ಲ. ಅಲ್ಲದೆ, ಈ ಭಾಗದಲ್ಲಿ ಮಾರುಕಟ್ಟೆಯೂ ಇದೆ. ಈ ಎಲ್ಲಾ ಸೂಕ್ಷ್ಮತೆಗಳನ್ನು ಅರಿತುಕೊಂಡು ಮನಪಾ ನಿವೇಶನ ನೀಡಬೇಕಿತ್ತು. ಆದರೆ ಅದು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪಟಾಕಿ ಮಾರಾಟಕ್ಕೆ ಜಾಗ ಹಂಚಲು ಮುಂದಾಗಿರುವ ಮನಪಾದ ಕ್ರಮ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನಪಾ ಅಧಿಕಾರಿಗಳು ದಬ್ಬಾಳಿಕೆ ಮಾಡಿ ಎಬ್ಬಸಿರುವುದು ತಪ್ಪು: ನಾಗರೀಕರ ಆಕ್ರೋಶ

ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಅಂಗಡಿಗಳನ್ನು ತೆರೆಯಲು ಮನಪಾ ಟೆಂಡರ್‌ ಕರೆದಿದೆ. ಮಂಗಳವಾರ ಬೆಳಗ್ಗೆ 11ಗಂಟೆಗೆ ಏಲಂ ನಡೆದು ಮನಪಾದ ವತಿಯಿಂದ ಅಂಗಡಿಗಳನ್ನು ವ್ಯಾಪಾರಿಗಳಿಗೆ ಹಸ್ತಾಂತರಿಸಲಿದೆ. ಆದರೆ, ಈ ವರೆಗೂ ಪಟಾಕಿ ಅಂಗಡಿ ನೀಡುವ ಕುರಿತಾಗಿ ಪೊಲೀಸ್‌ ಇಲಾಖೆ, ಅಗ್ನಿ ಶಾಮಕ ಇಲಾಖೆಗಳಿಂದ ಪರವಾನಿಗೆ ಪಡೆದು ಕೊಂಡಿಲ್ಲ ಎಂದು ತಿಳಿದು ಬಂದಿದೆ. ಇದ್ಯಾವುದನ್ನೂ ಪಡೆದುಕೊಳ್ಳುವ ಮೊದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿವೇಶನದಲ್ಲಿ ಅಧಿಕೃತ ಗುರುತುನ ಚೀಟಿ ಹೊಂದಿದ್ದ ವ್ಯಾಪಾರಿಗಳ ಮೇಲೆ ಮಹಾ ನಗರ ಪಾಲಿಕೆ ಅಧಿಕಾರಿಗಳು ದಬ್ಬಾಳಿಕೆ ಮಾಡಿ ಎಬ್ಬಸಿರುವುದು ತಪ್ಪು ಎಂದು ನಾಗರೀಕರೂ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

‌ಕಣ್ಣೀರಿಟ್ಟು ಬೇಡಿದ ವೃದ್ಧೆ

ಬೆಳಗ್ಗೆ ಎರಡು ಸಾವಿರ ರೂ. ಸಾಲ ಮಾಡಿ ಸೊಪ್ಪು ತರಕಾರಿ ತಂದಿದ್ದೇನೆ. ಮನಪಾದ ಮಹಿಳಾ ಅಧಿಕಾರಿಯೊಬ್ಬರು ಏಖಾಏಕಿ ಬಂದು ಅಂಗಡಿಗಳನ್ನು ಮುಚ್ಚಬೇಕು. ತೆರವು ಮಾಡಬೇಕೆಂದು ಹೇಳುತ್ತಿದ್ದಾರೆ. ಸೊಪ್ಪು ತಂದವರಿಗೆ ಇನ್ನೂ ಹಣ ನೀಡಿಲ್ಲ. ಅದನ್ನು ಹಿಂದಿರುಗಿಸಲೂ ಆಗುವುದಿಲ್ಲ. ಮಹಾ ನಗರ ಪಾಲಿಕೆ ಅಧಿಕಾರಿಗಳು ನಮ್ಮ ಗಂಜಿಗೂ ಮಣ್ಣು ಹಾಕಿದ್ದಾರೆ. ಈ ಇಳಿ ವಯಸ್ಸಿನಲ್ಲೂ ದುಡಿದು ತಿನ್ನಲೂ ಅಧಿಕಾರಿಗಳು ಬಿಡುತ್ತಿಲ್ಲ ಎಂದು ವ್ಯಾಪಾರಕ್ಕೆ ಬಂದಿದ್ದ ನೀಲಮ್ಮ ಅಧಿಕಾರಗಳಿಗೆ ಕೈಮುಗಿದು ಕಣ್ಣೀರಿಟ್ಟರು.

"ದೇಶದದಲ್ಲಿ ಬೀಬಿ ಬದಿ ವ್ಯಾಪಾರದಿಂದ ಕೋಟಿ ಕಟ್ಟಲೆ ಜನ ತಮ್ಮ ಜೀವನ ಕಂಡುಕೊಳ್ಳುತ್ತಿದ್ದಾರೆ. ಲೋನ್‌ ಮಾಡಿ ಅಂಗಡಿಗೆ ತರಕಾರಿ ತಂದಿದ್ದೇನೆ. ಯಾವುದೇ ಮನ್ಸೂಚನೆ ನೀಡದೆ ಅಧಿಕಾರಿಗಳು ನಮ್ಮನ್ನು ತೆಗಿಸುತ್ತಿದ್ದಾರೆ. ಮಹಿಳಾ ಅಧಿಕಾರಿ ನಮ್ಮ ಮೇಲೆ ದರ್ಪ ತೋಸಿಸಿದರು ಹಾಗಾಗಿ ಅಂಗಡಿಗಳನ್ನು ತೆರವು ಮಾಡಿದ್ದೇವೆ. ಆದರೆ, ಅವರು ನಮ್ಮಲ್ಲಿ ಮಾತನಾಡಲು ಬರುತ್ತಿಲ್ಲ. ಸಾರ್ವಜನಿಕರ ಜೊತೆ ಮಾತನಾಡಲು ಸರಕಾರಿ ಅಧಿಕಾರಿಗೆ ಯಾಕೆ ಹಿಂಜರಿಕೆ. ನಾವು ಬಡವರು, ನಮ್ಮ ಜೀವನ ಇದರಿಂದಲೇ ಸಾಗಬೇಕು"

- ವೀಣಾ, ವ್ಯಾಪಾರಿ

"ಅಂಗಡಿ ತೆರವಿಗೆ ಸಮಯಾವಕಾಶ ನೀಡುವಂತೆ ಕೈಕಾಲು ಹಿಡಿದರೂ ಬೇಡಿದರೂ ಮಹಾ ನಗರ ಪಾಲಿಕೆಯ ಮಹಿಳಾ ಅಧಿಕಾರಿ, ಪೊಲೀಸ್‌ ಅಧಿಕಾರಿಗೇ ಹೊಡೆಯಲು ಹೋದಹಾಗೆ ಒರಟಾಗಿ ಮಾತನಾಡುತ್ತಾರೆ ಎಂದಾದರೆ, ನಾವು ಬಡವರು ಇನ್ನು ನಮ್ಮ ಮೇಲೆ ಹೇಗೆ ಅವರು ದರ್ಪ ತೋರಿಸಿರಬಹುದು ಎಂಬುದನ್ನು ಮೇಲಾಧಿಕಾರಿಗಳು ಗಮನ ಹರಿಸಿ ನಮಗೆ ನ್ಯಾ ಒದಗಿಸಿಕೊಡಬೇಕು".

- ಹರೀಶ, ಬೀದಿ ಬದಿ ವ್ಯಾಪಾರಿ

ಬೈಕಂಪಾಡಿಯಲ್ಲಿ ಪ್ರತಿಭಟನೆ: ಪಟಾಕಿ ಮಾರಾಟಕ್ಕೆ ಅಂಗಡಿಗಳನ್ನು ನೀಡುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸ್ಥಳದಲ್ಲಿ ವ್ಯಾಪಾರ ಮಾಡು ತ್ತಿದ್ದ ಮಹಾನಗರ ಪಾಲಿಕೆಯ ಅಧಿಕೃತ ಗುರುತಿನ ಚೀಟಿ ಹೊಂದಿದ್ದ ಬೀದಿಬದಿ ವ್ಯಾಪಾರಿ ಗಳನ್ನು ಮನಪಾ ಅಧಿಕಾರಿಗಳು ಎಬ್ಬಿಸಿದ ಘಟನೆಯನ್ನು ವಿರೋಧಿಸಿ ಮಂಗಳವಾರ ಸಂಜೆ ಬೈಕಂಪಾಡಿಯಲ್ಲಿ ಪ್ರತಿ ಭಟನೆ ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್‌ ತಿಳಿಸಿದ್ದಾರೆ.

ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಆರೋಪಗಳ ಕುರಿತು ಘಟನಾ ಸ್ಥಳದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತೆ ವಾಣಿ ಆಳ್ವ ಅವರನ್ನು ʼವಾರ್ತಾಭಾರತಿʼ ಸ್ಪಷ್ಟನೆ ಕೇಳಿದ್ದು, ಯಾವುದೇ ಸ್ಪಷ್ಟನೆ ನೀಡುವುದಿಲ್ಲ ಎಂದು ಹೇಳಿದರು.





 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News