ವಿಧಾನ ಪರಿಷತ್ ಉಪ ಚುನಾವಣೆ: ದ.ಕ., ಉಡುಪಿಯಲ್ಲಿ ಶೇ 97.91 ಮತದಾನ

Update: 2024-10-21 12:24 GMT

ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸೋಮವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 392 ಮತದಾನ ಕೇಂದ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ (ಬೆಳಗ್ಗೆ 8 ಗಂಟೆ ಯಿಂದ ಸಂಜೆ 4ಗಂಟೆಯವರೆಗೆ) ಶೇ 97.91 ಮತದಾರರು ಮತ ಚಲಾಯಿಸಿದ್ದಾರೆ.

ಬೆಳಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡಿತ್ತು. ಬೆಳಗ್ಗೆ 10.30 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65 ಮತದಾರರಲ್ಲಿ 36 ಮಂದಿ ಮತ ಚಲಾಯಿಸಿದ್ದರು. 11ಗಂಟೆಯ ಹೊತ್ತಿಗೆ ಉಳ್ಳಾಲ ನಗರ ಸಭೆಯಲ್ಲಿ 32 ಸದಸ್ಯರಲ್ಲಿ 25 ಮಂದಿ ಮತ ಚಲಾಯಿಸಿದ್ದರು. ಬೆಳಗ್ಗೆ 11.30 ಗಂಟೆಗೆ ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ 17 ಸದಸ್ಯರಲ್ಲಿ 16 ಮಂದಿ ಮತಚಲಾಯಿಸಿದ್ದರು.

ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಪ್ರತಿನಿಧಿಸಿದ್ದ ಕೋಟಾ ಶ್ರೀನಿವಾಸ ಪೂಜಾರಿಯವರು ಲೋಕಸಭಾ ಚುನಾವಣೆಗೆ ಸ್ಫರ್ಧಿಸಿ ಜಯಗಳಿಸಿ ಸಂಸದರಾಗಿ ಆಯ್ಕೆಯಾದ ಕಾರಣ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 392 ಕೇಂದ್ರ ಗಳಲ್ಲಿ ಮತದಾನ ನಡೆದಿದೆ.

ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಉಳ್ಳಾಲ ನಗರಸಭೆಯ ಮತದಾನ ಕೇಂದ್ರದಲ್ಲಿ ಇಂದು ಬೆಳಗ್ಗೆ ಮತಚಲಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ  ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜ, ಮನಪಾ ಕಾರ್ಪೊರೇಟರ್ ಗಳು ಮತ ಚಲಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ 223 ಗ್ರಾಮ ಪಂಚಾಯತ್ ಗಳ 3264 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯ 60 ಸದಸ್ಯರು, ಎರಡು ನಗರ ಸಭೆಗಳ 62 ಸದಸ್ಯರು, 3 ಪುರಸಭೆಗಳ 73 ಸದಸ್ಯರು, 5 ಪಟ್ಟಣ ಪಂಚಾಯತ್ ಗಳ 81 ಸದಸ್ಯರು, ಓರ್ವ ಲೋಕಸಭಾ ಸದಸ್ಯ, 8 ವಿಧಾನ ಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 234 ಸ್ಥಳೀಯ ಸಂಸ್ಥೆ ಗಳ 3551 ಸದಸ್ಯರು ಹಾಲಿ ಮತದಾರರಾಗಿರುತ್ತಾರೆ.

ಉಡುಪಿ ಜಿಲ್ಲೆಯ 153 ಗ್ರಾಮ ಪಂಚಾಯತ್ ಗಳ 2361 ಸದಸ್ಯರು, ಒಂದು ನಗರ ಸಭೆಯ 35 ಸದಸ್ಯರು, 3 ಪುರಸಭೆಗಳ 69 ಸದಸ್ಯರು, ಒಂದು ಪಟ್ಟಣ ಪಂಚಾಯತ್ ನ 16 ಸದಸ್ಯರು, ನಾಲ್ಕು ವಿಧಾನ ಸಭಾ ಸದಸ್ಯರು, ಓರ್ವ ಲೋಕಸಭಾ ಸದಸ್ಯರು ಸೇರಿದಂತೆ 158 ಸ್ಥಳೀಯಾಡಳಿತ ಸಂಸ್ಥೆಗಳಿಂದ 2486 ಮತದಾರರಿದ್ದರು.

ಅ‌.24ರಂದು ನಗರದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News