ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ 9 ವರ್ಷ

ಮಂಗಳೂರು, ಮಾ.21: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ನಡೆದು ಇಂದಿಗೆ 9 ವರ್ಷಗಳಾಗಿವೆ. ಆದರೆ ಬಾಳಿಗಾ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಮಂಗಳೂರಿನ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದ ಕಾರ್‌ಸ್ಟ್ರೀಟ್‌ನ ಶ್ರೀ ವೆಂಕರಮಣ ದೇವಸ್ಥಾನದಿಂದ ಬಾಳಿಗಾ ಮನೆಯರೆಗೆ ಕಾಲ್ನಡಿಗೆ ಜಾಥಾ ನಡೆಯಿತು.
ಬಳಿಕ ವಿನಾಯಕಾ ಬಾಳಿಗಾರ ಮನೆಯ ಅಂಗಳದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಘಟಕರು ಈ ಪ್ರಕರಣದ ಸಾಕ್ಷಿದಾರರಿಗೆ ಸರಕಾರ ಧೈರ್ಯತುಂಬುವ ಕೆಲಸ ಮಾಡಬೇಕು. ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇದು ಸೌಜನ್ಯ ಪ್ರಕರಣದಂತೆ ಹಳ್ಳ ಹಿಡಿದೀತು. ಯಾವ ಕಾರಣಕ್ಕೂ ಆರೋಪಿಗಳು ಶಿಕ್ಷೆಯಿಂದ ಪಾರಾಗದಂತೆ ನೋಡಿಕೊಳ್ಳಬೇಕು. ಆ ಜವಾಬ್ದಾರಿ ಸರಕಾರದ್ದಾಗಿದೆ ಎಂದರು.

ಜಾಥಾದಲ್ಲಿ ಹಿರಿಯ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧಾ ಮತ್ತು ಹರ್ಷಾ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಸೋಮನಾಥ ನಾಯಕ್, ಹಿರಿಯ ವೈದ್ಯ ಡಾ. ಪಿ.ವಿ. ಭಂಡಾರಿ, ಮಾಜಿ ಮೇಯರ್ ಕೆ. ಅಶ್ರಫ್, ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಮಂಗಳಾ ನಾಯಕ್, ಸಾಮಾಜಿಕ ಹೋರಾಟಗಾರ್ತಿ ವಿದ್ಯಾನಾಯಕ್, ವಿವಿಧ ಸಂಘಟನೆ ಗಳ ಪ್ರಮುಖರಾದ ಡಾ. ಕೃಷ್ಣಪ್ಪಕೊಂಚಾಡಿ, ದೇವದಾಸ್ ಎಂ., ವಾಸುದೇವ ಉಚ್ಚಿಲ್, ನಿತಿನ್ ಕುತ್ತಾರ್, ಸಮರ್ಥ್ ಭಟ್, ಮಂಜಪ್ಪಪುತ್ರನ್, ಪ್ರಕಾಶ್ ಸಾಲ್ಯಾನ್, ಸುನೀಲ್ ಬಜಿಲಕೇರಿ, ಬಿ. ಶೇಖರ್, ವಿ.ಕುಕ್ಯಾನ್ ಮತ್ತಿತರರು ಪಾಲ್ಗೊಂಡಿದ್ದರು.
ಡಿವೈಎಫ್‌ಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

