ಹರೀಶ್ ಕುಮಾರ್ ಕಾಂಗ್ರೆಸ್‌ನೊಳಗಿನ ಆರ್‌ಎಸ್‌ಎಸ್ ನಾಯಕ: ಅನ್ವರ್ ಸಾದಾತ್ ಆರೋಪ

ಮಂಗಳೂರು, ಮಾ.22: ಕಾಂಗ್ರೆಸ್‌ನೊಳಗೆ ಆರ್‌ಎಸ್‌ಎಸ್‌ನವರು ಇದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದೊಮ್ಮೆ ಹೇಳಿದ್ದರು. ಕಾಂಗ್ರೆಸ್‌ನೊಳಗಿರುವ ಅಂತಹ ನಾಯಕರಲ್ಲಿ ಹರೀಶ್ ಕುಮಾರ್ ಅವರೂ ಕೂಡಾ ಇರಬಹುದೇ ಎಂಬ ಅನುಮಾನ ಉಂಟಾಗಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಹೇಳಿದ್ದಾರೆ.
ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಕ್ಫ್ ವಿಚಾರದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಈ ದೇಶದ ವಿದ್ಯಮಾ ನಗಳ ಬಗ್ಗೆ ಗೊತ್ತಿದ್ದು ಮಾತನಾಡಿದ್ದ ? ಅಥವಾ ಗೊತ್ತಿಲ್ಲದೆ ಮಾತನಾಡಿದ್ದ ಎನ್ನುವ ಬಗ್ಗೆ ಸಂಶಯ ಉಂಟಾಗಿದೆ ಎಂದರು.
ಕೇಂದ್ರ ಸರಕಾರದ ಜನವಿರೋಧಿ ನಿಲುವಿನ ಬಗ್ಗೆ ಎಸ್‌ಡಿಪಿಐ, ದೇಶಾದ್ಯಂತ ಹೋರಾಟಗಳನ್ನು ಕೈಗೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಆದರೆ ಇಷ್ಟು ಗೊತ್ತಿದ್ದು ಹರೀಶ್ ಕುಮಾರ್ ಅವರು ಎಸ್‌ಡಿಪಿಐ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದರು.
ಹರೀಶ್ ಕುಮಾರ್ ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಕಾಂಗ್ರೆಸ್‌ನ ಸ್ಥಿತಿ ಪಾತಾಲಕ್ಕಿಳಿದಿದೆ. ಹರೀಶ್ ಕುಮಾರ್‌ಗೆ ತಾಕತ್ತಿದ್ದರೆ ಅವರ ನಾಳ ಗ್ರಾಮದಲ್ಲಿ ಮುಂದಿನ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಗೆಲ್ಲಿಸಿಕೊಡಲಿ ಎಂದು ಸವಾಲು ಹಾಕಿದರು.
ಅವರು ನಮ್ಮ ವಿಚಾರದಲ್ಲಿ ಮೂಗು ತೋರಿಸುವುದನ್ನು ಬಿಟ್ಟು ಕಾಂಗ್ರೆಸ್‌ನೊಳಗಿನ ಸಮಸ್ಯೆಯನ್ನು ಬಗೆ ಹರಿಸಲಿ ಎಂದು ಸಲಹೆ ನೀಡಿದರು.
ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಮಾತನಾಡಿ, ಎಸ್‌ಡಿಪಿಐ ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ನಿರಂತರ ಹೋರಾಟ ಮಾಡುತ್ತಿದೆ. ಹರೀಶ್ ಕುಮಾರ್ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಬೆಳವಣಿಗೆ ಕುಂಠಿತವಾಗಿದ್ದು, ಅವರ ಸ್ವಂತ ಗ್ರಾಮದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಗ್ರಾಮಾಂತರ ಉಪಾಧ್ಯಕ್ಷ ಮುನೀಶ್ ಅಲಿ, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ನಗರ ಕಾರ್ಯದರ್ಶಿ ಸುಹೈಲ್ ಖಾನ್ ಉಪಸ್ಥಿತರಿದ್ದರು.