ಮಂಗಳೂರು : ಟ್ರೇಡಿಂಗ್ ಜಾಹೀರಾತು ನಂಬಿ 38 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರ
ಮಂಗಳೂರು: ಷೇರು ಟ್ರೇಡಿಂಗ್ ಬಗ್ಗೆ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿದ ವ್ಯಕ್ತಿ 38,53,961 ರೂ. ಕಳೆದುಕೊಂಡಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಫೇಸ್‌ಬುಕ್‌ನಲ್ಲಿ ಬಂದ ಲಿಂಕನ್ನು ತೆರೆದು ತನ್ನ ವೈಯಕ್ತಿಕ ವಿವರಗಳನ್ನು ನಮೂದಿಸಿದ್ದೆ. ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಷೇರು ಟ್ರೇಡಿಂಗ್‌ನಲ್ಲಿ ನೋಂದಣಿ ಮಾಡಲು 21 ಸಾವಿರ ರೂ. ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದ. ಆತ ಕಳುಹಿಸಿದ ಯುಪಿಐ ಐಡಿಗಳಿಗೆ ಹಣವನ್ನು ಪಾವತಿಸಿದ್ದೆ. ಬಳಿಕ ಟ್ರೇಡಿಂಗ್ ಕಂಪೆನಿಯವರು ಕರೆ ಮಾಡಿ ಮಾಹಿತಿ ಹಾಗೂ ತರಬೇತಿ ನೀಡಿದ್ದಾರೆ. ಹೆಚ್ಚು ಹಣ ತೊಡಗಿಸಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎನ್ನುವ ಆಮಿಷದಂತೆ ಹಂತ ಹಂತದವಾಗಿ ವಿವಿಧ ಖಾತೆಗಳಿಂದ 38,53,961 ರೂ. ಪಾವತಿಸಿದ್ದೆ. ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಕಾವೂರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.