ಮಾ.26 ಮಂಗಳೂರಿನಲ್ಲಿ ತುಳು ವಿದ್ಯಾರ್ಥಿ ಸಮ್ಮೇಳನ
ಮಂಗಳೂರು: ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಎರಡನೆಯ ವಿದ್ಯಾರ್ಥಿ ತುಳು ಸಮ್ಮೇಳನವು 2025 ಮಾರ್ಚ್ 26ರಂದು ಬೆಳಗ್ಗೆ 9.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಪ್ರಥಮ ತುಳು ವಿದ್ಯಾರ್ಥಿ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.ಈ ಸಮ್ಮೇಳನದ ವಿಶೇಷತೆ ಏನೆಂದರೆ ಇದರ ಉದ್ಘಾಟಕರೂ, ಅಧ್ಯಕ್ಷರೂ ವಿದ್ಯಾರ್ಥಿಗಳೇ ಆಗಿರುತ್ತಾರೆ. ಆ ಮೂಲಕ ಅವರಲ್ಲಿನ ತುಳುವಿನ ಕುರಿತಾದ ಅಭಿಮಾನವನ್ನು ಇನ್ನಷ್ಟು ಬೆಳೆಸಿ, ಅವರ ಪ್ರತಿಭೆಗೆ ವೇದಿಕೆಯನ್ನು ಒದಗಿಸಿಕೊಡುವುದು ಈ ಸಮ್ಮೇಳನದ ಮೂಲ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲಾ ರೀತಿಯಿಂದಲೂ ನಮ್ಮ ಮಕ್ಕಳು ಸಂತುಷ್ಟರಾಗಿ, ಭವಿಷ್ಯದಲ್ಲಿ ಎಲ್ಲಿಗೆ ಹೋದರೂ ನಮ್ಮ ತುಳುನಾಡಿನ ಬಗ್ಗೆ ಪ್ರೀತಿ ಅಭಿಮಾನವನ್ನು ಬೆಳೆಸಿಕೊಂಡು ಅದರ ಅಭಿವೃದ್ಧಿಗಾಗಿ ಮಾನಸಿಕವಾಗಿ ಸನ್ನದ್ಧರಾಗುವಂತೆ ಆಗಬೇಕು ಎನ್ನುವುದೇ ಈ ಸಮ್ಮೇಳನದ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಈ ಸಮ್ಮೇಳನದ ಅಧ್ಯಕ್ಷತೆಯನ್ನು ತುಳು ಭಾಷೆ, ತುಳು ಆರಾಧನೆ ಹಾಗೂ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿ, ಆ ಕುರಿತು ಅಮೂಲ್ಯವಾದ ಎರಡು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಲೋಕಕ್ಕೆ ಅರ್ಪಿಸಿರುವ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನ ಕಾನೂನು ವಿದ್ಯಾರ್ಥಿ ವಿಜೇತ್ ಶೆಟ್ಟಿ ವಹಿಸಲಿದ್ದಾರೆ. ಸಮ್ಮೇಳನದ ಉದ್ಘಾಟನೆಯನ್ನು ತುಳು ಭಾಷೆ ಹಾಗೂ ಕಲೆಗಳ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿರುವ ಪೊಂಪೈ ಕಾಲೇಜು ಐಕಳದ ತೃತೀಯ ಬಿ.ಎ. ವಿದ್ಯಾರ್ಥಿನಿ ಸನ್ನಿಧಿ ನೆರವೇರಿಸಲಿದ್ದಾರೆ. ಸಮ್ಮೇಳನದ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಮಾತ್ರವಲ್ಲದೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಣೀಯವಾದ ‘ತುತ್ತೈತ’ (ವಸ್ತ್ರವಿನ್ಯಾಸ ಮತ್ತು ಅಲಂಕಾರ) ಸ್ಪರ್ಧೆಯನ್ನು ಕೂಡಾ ಆಯೋಜಿಸಲಾಗುವುದು.
ಸಮ್ಮೇಳನದಲ್ಲಿ ನಾಡಿನ ಖ್ಯಾತ ತುಳು ವಿದ್ವಾಂಸರಾದ ಡಾ. ಇಂದಿರಾ ಹೆಗ್ಗಡೆ ಶುಭ ಹಾರೈಸಲಿದ್ದಾರೆ. ಇದೇ ಸಂದರ್ಭದಲ್ಲಿ ತುಳು ಸಿನಿಮಾ ಹಾಗೂ ನಾಟಕಗಳಿಗೆ ಪದ್ಯ ಬರೆದ ಹಿರಿಯ ಸಾಹಿತಿ ಭೋಜ ಸುವರ್ಣರಿಗೆ ‘ಡಾ. ಪ್ರಭಾಕರ ನೀರುಮಾರ್ಗ ತುಳು ಪರಿಷತ್ ಪ್ರಶಸ್ತಿ -2025 ನ್ನು ನೀಡಿ ಸನ್ಮಾನಿಸಲಾಗುವುದು. ಅಲ್ಲದೆ ಮಂಗಳೂರು ವಿವಿ ಬಿ.ಕಾಂ ಅಂತಿಮ ಪರೀಕ್ಷೆಯಲ್ಲಿ 650ರಲ್ಲಿ 600 ಪಡೆದ ವಿದ್ಯಾರ್ಥಿನಿ ಆರಾಧನಾ ಶೆಣೈ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಯ ಉಳವಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ರೂಪುಗೊಂಡಿದೆ ತುಳು ಪರಿಪತ್ತು. ಜಾತಿ ಮತ ಭೇದವಿಲ್ಲದೆ ತುಳು ಭಾಷೆಯನ್ನಾಡುವ ಸಾಹಿತಿ, ಶಿಕ್ಷಕರು, ಮಹಿಳೆಯರು, ಸೋದ್ಯೋಗಿಗಳು ಮುಂತಾದ ಸಮಾನಮನಸ್ಕರನ್ನು ಒಳಗೊಂಡು 2019ರಲ್ಲಿ ರೂಪುಗೊಂಡ ಸಂಸ್ಥೆ ಆಗಿರುವ ‘ತುಳು ಪರಿಷತ್’ ತುಳುವಿನ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಾ ಹಲವಾರು ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತುಳು ಪರಿಷತ್ ಗೌರವಾಧ್ಯಕ್ಷ ಡಾ.ಪ್ರಭಾಕರ ನೀರುಮಾರ್ಗ, ಉಪಾಧ್ಯಕ್ಷೆ ಚಂದ್ರಕಲಾ ರಾವ್, ಕಾರ್ಯದರ್ಶಿ ಸುಮತಿ ಹೆಗ್ಡೆ, ಕೋಶಾಧಿಕಾರಿ ಅಮಿತ್ ಅಶ್ವಿನ್ ಉಪಸ್ಥಿತರಿದ್ದರು.