ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರಿ ಕ್ಷೇತ್ರದ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಸಂಸ್ಥೆ: ದ.ಕ. ಡಿಸಿ ಮುಲ್ಲೈ ಮುಗಿಲನ್

Update: 2025-03-24 17:05 IST
ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರಿ ಕ್ಷೇತ್ರದ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಸಂಸ್ಥೆ: ದ.ಕ. ಡಿಸಿ ಮುಲ್ಲೈ ಮುಗಿಲನ್
  • whatsapp icon

ಮಂಗಳೂರು: ಶತಮಾನದ ಸಹಕಾರಿ ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರಿ ಕ್ಷೇತ್ರದ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಸಂಸ್ಥೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶ್ಲಾಘಿಸಿದರು.

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ರಜತ ಸಂಭ್ರಮದ ಅಂಗವಾಗಿ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಹಕಾರಿ ಬ್ಯಾಂಕ್ ಮೂಲಕ ನವೋದಯ ಸ್ವಸಹಾಯ ಸಂಘಗಳಿಗೆ ನೆರವು ನೀಡುತ್ತಾ ಮಹಿಳೆಯರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿರುವ ಸಹಕಾರಿ ಸಂಸ್ಥೆ ಉತ್ತಮ ಸಮಾಜ ನಿರ್ಮಾಣದಲ್ಲಿ ಕೊಡುಗೆ ನೀಡಿದೆ. ಸಹಕಾರಿ ಕ್ಷೇತ್ರ ಜನರ ನಂಬಿಕೆಯ ಮೇಲೆ ನಿಂತಿದೆ. ಮಹಿಳೆಯರು ಈ ಸಂಘಗಳ ಮೂಲಕ ಸಾಲ ಪಡೆದು ನಿಗದಿತ ಸಮಯದಲ್ಲಿ ಅದನ್ನು ಮರು ಪಾವತಿ ಮಾಡುತ್ತಿರುವುದು ಸದುದ್ದೇಶಕ್ಕೆ ಬಳಸಿಕೊಂಡು ಬರುತ್ತಿರುವುದು ಮಾದರಿ. ನವೊದಯ ಸ್ವ ಸಹಾಯ ಸಂಘಗಳು 25 ವರ್ಷಗಳ ಆಚರಣೆ ಸಮಾರಂಭ ಯಶಸ್ವಿಯಾಗಲಿ ಈ ಸಂದರ್ಭದಲ್ಲಿ ಸುಮಾರು ನಾಲ್ಕೂವರೆ ಲಕ್ಷಕ್ಕೂ ಅಧಿಕ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಮವಸ್ತ್ರ ವಿತರಣೆಯೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಸಮವಸ್ತ್ರ ವಿತರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿರುವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಐವನ್ ಡಿಸೋಜ ಮಾತನಾಡುತ್ತಾ, ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರಿ ರಂಗದ ಮೂಲಕ ಎಲ್ಲಾ ಜನರನ್ನು ತಲುಪಲು ಸಾಧ್ಯ ಎಂದು ತೋರಿಸಿ ಕೊಟ್ಟವರು‌ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಮತ್ತು ದಕ್ಷಿಣ ಕನ್ನಡ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ , ನವೋದಯ ಗ್ರಾಮ ವಿಕಾಸ ಚ್ಯಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ನವೋದಯ ಗುಂಪುಗಳ ರಚನೆ ಮಹಿಳಾ ಸಶಕ್ತತೆಗೆ ಸಹಕಾರಿಯಾಗಿದೆ ಎಂದರು. ನವೋದಯ ಸ್ವಸಹಾಯ ಗುಂಪುಗಳ ಮೂಲಕ ಸಮಾಜದ ವಿವಿಧ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದೆ. 5 ಲಕ್ಷ ದಷ್ಟು ಮಹಿಳೆಯರು ನವೋದಯ ಸ್ವ ಸಹಾಯ ಸಂಘಗಳಲ್ಲಿ ಇದ್ದಾರೆ.ರಾಜ್ಯದ 8 ಜಿಲ್ಲೆಯಲ್ಲಿ ನವೋದಯ ಸ್ವಸ್ವಹಾಯ ಸಂಘಗಳ ಸದಸ್ಯರಿದ್ದಾರೆ. ಈ ಬಾರಿ ದೇಶಕ್ಕೆ ಮಾದರಿಯಾಗಿ ಒಂದೂವರೆ ಲಕ್ಷ ನವೋದಯ ಗುಂಪುಗಳ ಸದಸ್ಯರ ಮೂಲಕ ಒಂದೇ ಸಮವಸ್ತ್ರದಲ್ಲಿ ಸೇರಿ ಮಂಗಳೂರಿನಲ್ಲಿ ಸಮಾವೇಶ ನಡೆಸುವ ಗುರಿ ಹೊಂದಲಾಗಿದೆ. ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣ ಮುಂದುವರಿಸುತ್ತಿರುವುದು ಅವರಿಗೆ ಮೆಡಿಕಲ್ ಇಂಜಿನಿಯರಿಂಗ್ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಚಕ್ರಬಡ್ಡಿ ವಿಧಿಸಿ ಖಾಸಗಿ ಫೈನಾನ್ಸ್ ಸಂಸ್ಥೆಗಳ ಮೂಲಕ ವೈಯಕ್ತಿಕ ಸಾಲ ನೀಡುವವರಿಂದ ಜನರಿಗೆ ಸಮಸ್ಯೆಯಾಗಿದೆ. ನವೋದಯ ಸ್ವಸಹಾಯ ಸಂಘಗಳು ಈ ರೀತಿ ಮಾಡುತ್ತಿಲ್ಲ. ಸಾಮೂಹಿಕ ಹೊಣೆಗಾರಿಕೆಯೊಂದಿಗೆ ತಮ್ಮೊಳಗೆ ಸಾಲ ವಿತರಿಸುತ್ತಿವೆ‌. ಈ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಶೇ.99 ಸಾಲ ಮರುಪಾವತಿ ಮಾಡಿದ್ದಾರೆ. ಇದರಿಂದ ಬ್ಯಾಂಕ್ ಗೌರವ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಡಾ.ಎಂ. ಎನ್‌.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ನವೋದಯ ಸ್ವಸಹಾಯ ಗುಂಪುಗಳ ಮೂಲಕ ದೇಶ ಗುರುತಿಸುವ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ ಎಂದು ಕಿಶೋರ್ ಆಳ್ವ ಶ್ಲಾಘಿಸಿದರು.

ಸಮಾರಂಭದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಟಿ. ಜಿ ರಾಜರಾಮ್ ಭಟ್ ಭಾಸ್ಕರ್‌ ಎಸ್‌. ಕೋಟ್ಯಾನ್‌, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್‌ ರೈ ಬಿ., ಎಸ್‌.ಬಿ. ಜಯರಾಮ ರೈ, ಎಂ.ಮಹೇಶ್ ಹೆಗ್ಡೆ, ಜೈರಾಜ್‌ ಬಿ.ರೈ, ಕುಶಲಪ್ಪ ಗೌಡ, ಎಸ್. ಎನ್. ಮನ್ಮಥ ,ರಾಜೇಶ್ ರಾವ್, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ನವೋದಯ ಟ್ರಸ್ಟಿಗಳಾದ ಮೇಘರಾಜ್ ಜೈನ್, ಸುನಿಲ್ ಕುಮಾರ್ ಬಜಗೋಳಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಸ್ಕ್ಯಾಡ್ಸ್ ಅಧ್ಯಕ್ಷರಾದ ರವೀಂದ್ರ ಕಂಬಳಿ,ಉಪಸ್ಥಿತರಿದ್ದರು.ನ

ವೋದಯ ಗ್ರಾಮ ವಿಕಾಸ ಚ್ಯಾರಿಟೇಬಲ್ ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ವಂದಿಸಿದರು. ನಿತೀಶ್ ಶೆಟ್ಟಿ ಎಕ್ಕಾರು‌ ಕಾರ್ಯಕ್ರಮ ನಿರೂಪಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News