ಕಮ್ಯೂನಿಟಿ ಸೆಂಟರ್: ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ವಿವಿಧ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ಮತ್ತು ಪದವಿ ಶಿಕ್ಷಣ ಪಡೆಯುತ್ತಿರುವ 115 ವಿದ್ಯಾರ್ಥಿಗಳಿಗೆ ಕಮ್ಯೂನಿಟಿ ಸೆಂಟರ್ ವತಿಯಿಂದ ವಿದ್ಯಾರ್ಥಿ ವೇತನವನ್ನು ಸೋಮವಾರ ವಿತರಿಸಲಾಯಿತು. 82 ವಿದ್ಯಾರ್ಥಿಗಳಿಗೆ ವೈಟ್‌ಸ್ಟೋನ್ ಮಾಲಕ ಬಿ.ಎಂ. ಶರೀಫ್ ಜೋಕಟ್ಟೆ ವಿದ್ಯಾರ್ಥಿ ವೇತನ ನೀಡಿದರೆ, ಉಳಿದ 33 ವಿದ್ಯಾರ್ಥಿಗಳಿಗೆ ಪುತ್ತೂರು ಕಮ್ಯೂನಿಟಿ ಸೆಂಟರಿನ ಸ್ಥಾಪಕ ಸದಸ್ಯ ಉದ್ಯಮಿ ಅಬ್ದುಲ್ ಸತ್ತಾರ್ ನೀಡಿದರು.
ಕಮ್ಯೂನಿಟಿ ಸೆಂಟರ್ ಮೂಲಕ 582 ವಿದ್ಯಾರ್ಥಿಗಳು ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು. 2024-25 ಸಾಲಿನಲ್ಲಿ 468 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಟೀಂ ಬಿ ಹ್ಯೂಮನ್‌ನ ಸ್ಥಾಪಕ ಆಸಿಫ್ ಡೀಲ್ಸ್ ಮಾತನಾಡಿ ಕಮ್ಯೂನಿಟಿ ಸೆಂಟರ್ ತುಂಬಾ ಯಶಸ್ವಿಯಾಗಿ ಮುನ್ನಡೆಯಲು ಅದರ ರಚನಾತ್ಮಕ ಯೋಜನೆಗಳು ಮುಖ್ಯ ಕಾರಣ. ವಿದ್ಯಾರ್ಥಿಗಳ ದಾಖಲೆ ಮತ್ತು ವೆರಿಫಿಕೇಶನ್‌ನ್ನು ಬಹಳ ಅಚ್ಚುಕಟ್ಟಾಗಿ ಮಾಡುವ ಮೂಲಕ ಅರ್ಹ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿದ ಕಮ್ಯುನಿಟಿ ಸೆಂಟರ್ ವಿದ್ಯಾರ್ಥಿಗಳನ್ನು ಸಾಮಾಜಿಕ ನಾಯಕತ್ವಕ್ಕೆ ತಯಾರುಗೊಳಿಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.
ಉದ್ಯಮಿ ಬಿ.ಎಂ. ಶರೀಫ್ ವೈಟ್‌ಸ್ಟೋನ್‌ರ ಪುತ್ರ ಶೋಹೈಬ್ ವೈಟ್‌ಸ್ಟೋನ್ ಮಾತನಾಡಿ, ನನ್ನ ತಂದೆಯವರು ಈ ಸೆಂಟರಿನ ಕಾರ್ಯಕ್ರಮಗಳ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದಾರೆ. ಅವರು ನಮಗೆ ಸಾಮಾಜಿಕ ಜೀವನದಲ್ಲಿ ಸೇವಾಗುಣವನ್ನು ಕಲಿಸಲು ಸಮುದಾಯದ ಪ್ರಗತಿಯ ಪ್ರಯತ್ನದಲ್ಲಿ ಸೇರಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಸೇವಾ ಪರಂಪರೆಯನ್ನು ನಾವು ಮುಂದೆ ಕೊಂಡು ಹೋಗಲಿದ್ದೇವೆ. ಹಾಗಾಗಿ ಉತ್ತಮ ಯೋಜನೆಯ ಜೊತೆ ನಾವಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟೀಮ್ ಬೀ ಹ್ಯೂಮನ್‌ನ ಟ್ರಸ್ಟಿ ಬಿ.ಎಂ ಶರೀಫ್ ಹಾಜಿ, ಎನ್‌ಆರ್‌ಐ ಸಂಯೋಜಕ ಇಮ್ರಾನ್ ಹಸನ್, ನವಾಝ್ ವೈಟಸ್ಟೋನ್, ಇಕ್ಬಾಲ್ ಬಂಟ್ವಾಳ, ರಹಿಮಾನ್, ಅಲ್ತಾಫ್, ಕಮ್ಯೂನಿಟಿ ಸೆಂಟರಿನ ಇಮ್ತಿಯಾಝ್, ನಝೀರ್ ಭಾಗವಹಿಸಿದ್ದರು.