ವಿಧಾನಸೌಧದಲ್ಲಿ ಶಾಶ್ವತ ವಿದ್ಯುತ್‌ದೀಪಾಲಂಕಾರ; ಎಪ್ರಿಲ್ ಮೊದಲ ವಾರ ಉದ್ಘಾಟನೆ: ಯು.ಟಿ.ಖಾದರ್

ಮಂಗಳೂರು, ಮಾ.24: ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯಾಗಿದ್ದು, ಎಪ್ರಿಲ್ ಮೊದಲ ವಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿಪಕ್ಷ ನಾಯಕರನ್ನು ಒಳಗೊಂಡು ಉದ್ಘಾಟನೆ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಟಿಯ ವೇಳೆ ಈ ವಿಷಯ ತಿಳಿಸಿದ ಅವರು,ಶಾಶ್ವತ ವಿದ್ಯುತ್ ದೀಪಗಳ ಅಳವಡಿಕೆಯ ಟೆಸ್ಟಿಂಗ್ ಸಂದರ್ಭದಲ್ಲಿಯೇ ಸಾಕಷ್ಟು ಮಂದಿ ವೀಕ್ಷಿಸುವ ಮೂಲಕ ಇದು ಮುಂದೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಲಿದೆ ಎಂದರು.
ವಾರದ ಶನಿವಾರ ಮತ್ತು ರವಿವಾರ ಸಂಜೆ 6ರಿಂದ 9 ಗಂಟೆಯವರೆಗೆ ವಿಧಾನ ಸೌಧ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ. ವಿಧಾನ ಸೌಧದ ಸುತ್ತಲಿನ ಜನ ನಿಬಿಡತೆಯನ್ನು ಟ್ರಾಫಿಕ್ ಪೊಲೀಸರು ನಿರ್ವಹಿಸಲಿರುವರು. ಎಲ್‌ಇಡಿ ದೀಪಗಳನ್ನು ಅಳವಡಿಸಿರುವುದರಿಂದ ಖರ್ಚು ವೆಚ್ಚವೂ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.
ಉಳ್ಳಾಲ ಕ್ಷೇತ್ರದಲ್ಲಿ ರಿವರ್ ಫ್ರಂಟ್ ಹಾಗೂ ಸೀ ಫ್ರಂಟ್ ಎಂಬ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಿವರ್ ಫ್ರಂಟ್ ಯೋಜನೆ 160 ಕೋಟಿ ರೂ.ಗಳಲ್ಲಿ ನಡೆಯಲಿದ್ದು, 20 ಕೋಟಿ ರೂ.ಗಳ ಕಾಮಗಾರಿ ಆರಂಭವಾಗಿದೆ. ಹರೇಕಳ- ಕಲ್ಲಾಪು- ಸಜಿಪವರೆಗಿನ ನೇತ್ರಾವತಿ ತಟದಲ್ಲಿ ರಸ್ತೆ ನಿರ್ಮಾಣ ಕಾರ್ಯ ಈ ಯೋಜನೆಯಡಿ ಆಗಲಿದ್ದು, ಹರೇಕಳದಿಂದ ಕಲ್ಲಾಪು, ಹರೇಕಳದಿಂದ ಪಾವೂರು ನಡುವೆ ಕಾಮಗಾರಿ ಆರಂಭವಾಗಿದೆ. ಇದು ದೀರ್ಘಾವಧಿಯ ಯೋಜನೆಯಾಗಿದೆ.
ಕೋಟೆಪುರದಿಂದ ಆರಂಭವಾಗುವ ಸೀ ಫ್ರಂಟ್ ಯೋಜನೆ ಸುಮಾರು 1000 ಕೋಟಿ ರೂ.ಗಳದ್ದಾಗಿದೆ. ಸದ್ಯ ಈ ಇದು ಯೋಜನೆಯ ಆರಂಭಿಕ ಹಂತದಲ್ಲಿದೆ ಎಂದವರು ಹೇಳಿದರು.
ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ವಿರುದ್ಧ ಈಗಿರುವ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಕ್ರಮ ವಹಿಸಬೇಕು. ಉದಾಹರಣೆಗೆ ಕೆಲವು ಸಂಸ್ಥೆಗಳು 10 ಜಾಹೀರಾತು ಅಳವಡಿಸಲು ಅನುಮತಿ ಪಡೆದು ನೂರಾರು ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದು ನಡೆಯುತ್ತಿದೆ. ಇದನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ನೀತಿಯಲ್ಲಿ ಬದಲಾವಣೆ ಮಾಡಬೇಕಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಜಾಗದಲ್ಲಿ ಜಾಹೀರಾತು ಅಳವಡಿಸಬೇಕಾದರೂ ಸ್ಥಳೀಯಾಡಳಿತದ ಅನುಮತಿ ಪಡೆಯಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಯು.ಟಿ.ಖಾದರ್ ಉತ್ತರಿಸಿದರು.