ನೀರು ಉಣಿಸಿ ಪ್ರಾಣಿ ಪಕ್ಷಿಗಳ ಜೀವ ರಕ್ಷಿಸಿ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಸಕಲ ಜೀವ ಸಂಕುಲಕ್ಕೆ ನೀರು ಆಧಾರವಾಗಿದ್ದು, ಜೀವ ಜಲ ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ತಾಪಮಾನ ಹೆಚ್ಚುತ್ತಿದ್ದು ಪ್ರಾಣಿ ಪಕ್ಷಿಗಳ ಮೂಕ ವೇದನೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನೀರು ಉಣಿಸಿ ಪ್ರಾಣಿ ಪಕ್ಷಿಗಳ ಜೀವ ರಕ್ಷಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದ್ದಾರೆ.
ದ.ಕ.ಜಿಲ್ಲಾಡಳಿತ, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಕಾಲೇಜು ಸಹಯೋಗದಲ್ಲಿ ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಜೀವ ಜಲ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮನೆ ಪರಿಸರ, ಕಂಪೌಂಡ್, ಟೆರೇಸ್‌ನಲ್ಲಿ ಸಣ್ಣ ಪಾತ್ರೆ ಅಥವಾ ಸಿಮೆಂಟ್ ತೊಟ್ಟಿಗಳಲ್ಲಿ ನೀರು ಇಡುವ ಮೂಲಕ ಪ್ರಾಣಿ ಪಕ್ಷಿಗಳಿಗೆ ನೆರವಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬ್ರಾಯನ್ ಪಿಂಟೊ, ಕಾರ್ಯದರ್ಶಿ ರಾಜೇಶ್ ಸೀತಾರಾಮ್, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ನಿಯೋಜಿತ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ರವಿ ಜಲನ್, ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಕಾಲೇಜು ಘಟಕದ ಸಂಯೋಜಕಿ ಭಾರತಿ ಪಿಲಾರ್ , ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ಶೆಟ್ಟಿ ದಡ್ಡಂಗಡಿ, ರೆಡ್‌ಕ್ರಾಸ್ ನಿರ್ದೇಶಕ ರವೀಂದ್ರನಾಥ್ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು. ಅಭಿಯಾನದ ಅಂಗವಾಗಿ ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ವಿದ್ಯಾರ್ಥಿಗಳಿಗೆ ಸಣ್ಣ ಸಿಮೆಂಟ್ ತೊಟ್ಟಿಗಳನ್ನು ವಿತರಿಸಲಾಯಿತು.