ಹನಿಟ್ರ್ಯಾಪ್ ಆರೋಪ| ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂಸದ ಗೋವಿಂದ ಕಾರಜೋಳ ಆಗ್ರಹ

ಮಂಗಳೂರು: ರಾಜ್ಯದ ಹಿರಿಯ ಸಚಿವರೊಬ್ಬರು ಹನಿಟ್ರ್ಯಾಪ್‌ಗೆ ಒಳಗಾದ ಬಗ್ಗೆ ವಿಧಾನಸಭೆಯಲ್ಲೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ತನಿಖೆ ಆರಂಭಿಸಿಲ್ಲ. ಅನೈತಿಕತೆಯನ್ನು ಬೆಂಬಲಿಸುವ ಸರಕಾರ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಿ, ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಚಿತ್ರದುರ್ಗ ಸಂಸದ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟ ಮತ್ತು ಅನೈತಿಕ ಸರಕಾರವಾಗಿದೆ ಎಂದು ಆರೋಪಿಸಿದರು.
ಅಹಿಂದ ನಾಯಕ ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ 23-24ನೇ ಸಾಲಿನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬಳಕೆಯಾಗಬೇಕಿದ್ದ 11,144 ಕೋಟಿ ರೂ. ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದರು.
2024-25ನೇ ಸಾಲಿನಲ್ಲಿ 14 ಸಾವಿರ ಕೋಟಿ ಎಸ್‌ಸಿ ಎಸ್‌ಟಿ ಅನುದಾನವನ್ನು ದುರ್ಬಳಕೆ ಮಾಡಿ ದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ 42 ಸಾವಿರ ಕೋಟಿ ರೂ. ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮೀಸಲಿಡ ಲಾಗಿದೆ ಎಂದು ಹೇಳಿದ್ದಾರೆ. ಆದರೆ, ಈ ಪೈಕಿ 7 ಸಾವಿರ ಕೋಟಿ ಮಾತ್ರ ದೊರೆಯುತ್ತಿದೆ. 42 ಸಾವಿರ ಕೋಟಿ ರೂ. ಪೈಕಿ ಶೇ.50ರಷ್ಟು ಇಲಾಖೆಗಳಿಗೆ ಹಂಚಿಕೆಯಾಗುತ್ತಿದೆ. ಉಳಿದ 21 ಸಾವಿರ ಕೋಟಿ ರೂ. ಪೈಕಿ 14 ಸಾವಿರ ಕೋಟಿ ಗ್ಯಾರಂಟಿಗೆ ಬಳಕೆಯಾಗಲಿದೆ. 1.5 ಕೋಟಿ ದಲಿತರಿಗೆ 7 ಸಾವಿರ ಕೋಟಿ ರೂ. ಮಾತ್ರ ಉಳಿಯುತ್ತದೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಇದು ಅಭಿವೃದ್ಧಿ ಶೂನ್ಯ ಸರಕಾರವಾಗಿದೆ. ಸಮರ್ಪಕ ಆಡಳಿತವನ್ನೂ ನೀಡುತ್ತಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಪ್ರತಿದಿನ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಜನರ ಜೀವನಕ್ಕೆ ಈ ಸರಕಾರ ಹೊರೆಯಾಗಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಭಾರತಿ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಅಸಂಘಟಿಕ ಪ್ರಕೋಷ್ಠದ ರಾಜೇಶ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಮುಖಂಡರಾದ ಸುಲೋಚನಾ ಭಟ್, ಪೂಜಾ ಪೈ, ಸಂಜಯ ಪ್ರಭು ಉಪಸ್ಥಿತರಿದ್ದರು.
ರಾಜ್ಯ ಸರಕಾರದ ದುರಾಡಳಿತ, ತಪ್ಪು ನಿರ್ಧಾರ ಪ್ರಶ್ನಿಸಿದ ಬಿಜೆಪಿ 18 ಮಂದಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವುದು ಖಂಡನೀಯ. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕ ರಾಗಿದ್ದ ವೇಳೆ ಸದನದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದರು. ಸದನದ ಬಾಗಿಲಿಗೆ ಒದ್ದಿದ್ದರು. ಆಸನದ ಮೇಲೆ ಏರಿ ಕುಣಿದಿದ್ದರು. ಕಾಂಗ್ರೆಸ್ ಸದಸ್ಯರು ಸಭಾಪತಿ ಅವರನ್ನು ಎಳೆದಾಡಿದ್ದರು. ಈ ಎಲ್ಲದರ ವಿಡಿಯೋವನ್ನು ಸಿದ್ದರಾಮಯ್ಯ ಅವರು ಮತ್ತೊಮ್ಮೆ ನೋಡಲಿ. ಆಗ ಬಿಜೆಪಿ ಸರಕಾರ ಇಂತಹ ಕ್ರಮ ಕೈಗೊಂಡಿರಲಿಲ್ಲ. ಈಗ ಅಧಿಕಾರದ ಮದದಿಂದ ಬಿಜೆಪಿ ಸದಸ್ಯರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ. ದಿನದ ಮಟ್ಟಿಗೆ, ಒಂದು ಅಥವಾ ಎರಡು ದಿನ ಅಮಾನತು ಮಾಡುವುದು ಸೂಕ್ತ. ಆದರೆ, ಆರು ತಿಂಗಳು ಅಮಾನತು ಮಾಡುವ ಮೂಲಕ ಸಿದ್ದರಾಮಯ್ಯ ಸರಕಾರ ನೈತಿಕತೆ ಕಳೆದುಕೊಂಡಿದೆ ಎಂದು ಕಾರಜೋಳ ಹೇಳಿದರು.