ಪುತ್ತೂರು- ಉಪ್ಪಿನಂಗಡಿ ರಸ್ತೆಗೆ 20 ಕೋ.ರೂ. ಅನುದಾನ: ಶಾಸಕ ಅಶೋಕ್ ಕುಮಾರ್ ರೈ

Update: 2023-09-30 17:26 GMT

ಉಪ್ಪಿನಂಗಡಿ: ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ 20 ಕೋಟಿ ರೂ. ಹಣ ಬಿಡುಗಡೆ ಯಾಗಿದ್ದು, ಬೇರಿಕೆಯಿಂದ ಎಂಆರ್‍ಪಿಎಲ್ ಪೆಟ್ರೋಲ್ ಪಂಪ್‍ವರೆಗಿನ ರಸ್ತೆ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಂದ ಮುಂದಿನ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೇರಿಕೆಯಿಂದ ಎಂಆರ್‍ಪಿಎಲ್ ಪೆಟ್ರೋಲ್‍ಪಂಪ್‍ವರೆಗಿನ ಕಾಮಗಾರಿ ಸೇರಿದಂತೆ ಅದರ ಮುಂದುವರಿದ ಭಾಗಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಬೇರಿಕೆಯಿಂದ ಎಂಆರ್‍ಪಿಎಲ್ ಪೆಟ್ರೋಲ್‍ಪಂಪ್‍ವರೆಗಿನ ಕಾಮಗಾರಿ ಹಾಗೂ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ಚತುಷ್ಪಥ ರಸ್ತೆಯನ್ನು ನಿರ್ಮಿಸಲಾಗುವುದು ಹಾಗೂ ಈಗಾಗಲೇ ಬಾಕಿಯುಳಿ ದಿರುವ ಸೇಡಿಯಾಪು- ವಿನಾಯಕನಗರ (ಮಹಿಷಮರ್ದಿನಿ ದೇವಸ್ಥಾನ ದ್ವಾರದ ಬಳಿ) ತನಕ ಹಾಗೂ ಬೊಳುವಾರು- ಹಾರಾಡಿವರೆಗೆ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಬಳಿಕ ಬೊಳುವಾರಿನಿಂದ 34 ನೆಕ್ಕಿಲಾಡಿಯವರೆಗೆ ಚತುಷ್ಪಥ ರಸ್ತೆಯ ಮಧ್ಯದಲ್ಲಿ ದಾರಿ ದೀಪಗಳನ್ನು ಅಳವಡಿಸಲಾಗುವುದು. ರಸ್ತೆ ಕಾಮಗಾರಿ ಆರಂಭವಾಗದಿದ್ದರೂ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದವರಿಗೆ ಅವರ ವ್ಯಾಪ್ತಿಯಲ್ಲಿ ರಸ್ತೆಯಲ್ಲಿರುವ ಹೊಂಡ- ಗುಂಡಿಗಳನ್ನು ಮುಚ್ಚಿ ರಸ್ತೆಯ ನಿರ್ವಹಣೆಯನ್ನು ನೋಡಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ. ಮಳೆಯ ಕಾರಣದಿಂದ ಇದು ಸ್ವಲ್ಪ ವಿಳಂಬ ವಾಗಿದೆ. ಮಳೆ ನಿಂತ ಕೂಡಲೇ ಚತುಷ್ಪಥ ರಸ್ತೆಯ ಕೆಲಸವೂ ಆರಂಭವಾಗಲಿದೆ ಎಂದು ತಿಳಿಸಿದರು.

ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಹೊತ್ತಿನಲ್ಲಿ ಉಪ್ಪಿನಂಗಡಿ- ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಫುಲ್ ರಷ್ ಇರುವ ಬಗ್ಗೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈ, ಕೆಎಸ್ಸಾರ್ಟಿಸಿ ಪುತ್ತೂರು ಡಿಪೋದಲ್ಲಿ ಬಸ್‍ಗಳ ಕೊರತೆ ಇದೆ. 25 ಹೊಸ ಬಸ್‍ಗಳು ಇಲ್ಲಿಗೆ ಬರಲಿದ್ದು, ಅವುಗಳ ಬಾಡಿಯ ಕೆಲಸಗಳು ನಡೆಯುತ್ತಿವೆ. ಆ ಬಳಿಕ ಹೆಚ್ಚುವರಿ ಬಸ್‍ಗಳನ್ನು ಹಾಕಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News