ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ

Update: 2024-09-19 15:13 GMT

ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ನಡೆದ ಹತ್ತು ಕೋಟಿ ವೆಚ್ಚದ ಕಾಮಗಾರಿಯ ಬಗ್ಗೆ ಮಾಹಿತಿಯೇ ನೀಡದ ಅಧಿಕಾರಿಗಳ ವಿರುದ್ಧ ಘರಂ ಆದ ಬಿಜೆಪಿ ಸದಸ್ಯರು ಈ ಬಗ್ಗೆ ಪುರಸಭೆಯ ಆಡಳಿತಾಧಿಕಾರಿಯಾಗಿದ್ದ ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಯವರೇ ಮಾಹಿತಿ ನೀಡಬೇಕೆಂದು ಆಗ್ರಹಿಸಿದ ಘಟನೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸೋಮೇಶ್ವರ ಗ್ರಾಮ ಸಭೆಯು ಪುರಸಭೆಯಾಗಿ ಮೇಲ್ದರ್ಜೆಗೇರಿದ ನಾಲ್ಕು ವರುಷಗಳ ಬಳಿಕ ಗುರುವಾರದಂದು ಪುರಸಭಾ ಅಧ್ಯಕ್ಷೆ ಕಮಲ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಸಾಮಾನ್ಯ ಸಭೆ ನಡೆಯಿತು.

ಸಭೆಗೆ ಅಮೃತ ನಗರೋತ್ಥಾನ ಯೋಜನೆಯ ಇಂಜಿನಿಯರನ್ನು ಆಹ್ವಾನಿಸಲಾಗಿದ್ದರೂ ಅವರು ಸಭೆಗೆ ಗೈರಾಗಿದ್ದರು.

2019 ರಲ್ಲಿ ಅಮೃತ ನಗರೋತ್ಥಾನದ ನಾಲ್ಕನೇ ಹಂತದ ಯೋಜನೆಯಡಿ ಸೋಮೇಶ್ವರ ಪುರಸಭೆಗೆ ಹತ್ತು ಕೋಟಿ ಅನುದಾನ ಮಂಜೂರಾಗಿತ್ತು.2022 ರಲ್ಲಿ ಕ್ರಿಯಾಯೋಜನೆಯಲ್ಲಿ ಅನುದಾನ ಹಂಚಿಕೆಯಾಗಿ ಕಾಮಗಾರಿಗಳ ಟೆಂಡರ್ ಆಗಿತ್ತು.ಗುತ್ತಿಗೆದಾರರು ಪುರಸಭೆಯ ವ್ಯಾಪ್ತಿಯಲ್ಲಿ ತಮಗಿಷ್ಟ ಬಂದಂತೆ ಅರ್ಧಂಬರ್ಧ ಕಾಮಗಾರಿ ನಡೆಸಿದ್ದು ಒಟ್ಟು ನಡೆದ ಕಾಮಗಾರಿಯ ಬಗ್ಗೆ ನಮಗೆ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿಲ್ಲವೆಂದು ಬಿಜೆಪಿ ಪುರಸಭಾ ಸದಸ್ಯ ಹರೀಶ್ ಕುಮಾರ್ ಸಭೆಗೆ ತಿಳಿಸಿದರು.

ಯೋಜನೆಯಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಖರೀದಿಗೆ ಮೂರು ವರುಷದ ಹಿಂದೆ ಅನುದಾನ ಬಿಡುಗಡೆಯಾಗಿದ್ದು ,ವಿದ್ಯಾರ್ಥಿಗಳ ಕೋರ್ಸ್ ಮುಗಿದರೂ ಲ್ಯಾಪ್ ಟ್ಯಾಪ್ ಅವರ ಕೈಗೆ ಸೇರಿಲ್ಲ.ಇದರ ಹಿಂದೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಶಂಕೆ ಇದ್ದು ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿದ್ದರೆ ಮುಂದಿನ ಸಾಮಾನ್ಯ ಸಭೆಗಳನ್ನು ನಡೆಯಲು ಬಿಡುವುದಿಲ್ಲ,ಸಾರ್ವಜನಿಕರ ದುಡ್ಡು ದುರುಪಯೋಗವಾದರೆ ನಾವು ಸುಮ್ಮನಿರುವುದಿಲ್ಲವೆಂದು ಬಿಜೆಪಿ ಸದಸ್ಯ ಮನೋಜ್ ಕಟ್ಟೆಮನೆ ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಅವರು ,ನಗರೋತ್ತಾನ ಯೋಜನೆಯ ಬಗ್ಗೆ ಇಂಜಿನಿಯರ್ ಬಳಿ ಮಾಹಿತಿ ಕೇಳಲಾಗು ವುದು.ಮುಂದಿನ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ಪುರಸಭಾ ಕಾಂಗ್ರೆಸ್ ಸದಸ್ಯ ಯು.ಅಬ್ದುಲ್ ಸಲಾಮ್ ಮಾತನಾಡಿ ಪುರಸಭಾ ವ್ಯಾಪ್ತಿಯಲ್ಲಿ ಪ್ರಭಾವಿಗಳು ಮೂವತ್ತು ಸೆಂಟ್ಸ್ ನಷ್ಟು ಸರಕಾರಿ ಜಾಗವನ್ನು ಕಬಳಿಸಿ ಮನೆ ಕಟ್ಟಿದ್ದಾರೆ.ಇಪ್ಪತ್ತು ವರುಷದ ಹಿಂದೆಯೇ ಇದಕ್ಕೆ ಸೋಮೇಶ್ವರ ಗ್ರಾಮ ಸಭೆಯಿಂದ ಡೋರ್ ನಂಬರನ್ನು ಕೊಡಲಾಗಿದೆ.ಅಧಿಕಾರಿಗಳು ಸರಕಾರಿ ಜಾಗವೇ ಇಲ್ಲ ಅನ್ನುತ್ತಿದ್ದಾರೆ. ಅತಿಕ್ರಮಣ ಮಾಡಿರುವ ಸರಕಾರಿ ಜಾಗಗಳನ್ನು ಗುರುತಿಸುವ ಕಾರ್ಯ ನಡೆಯಬೇಕೆಂದರು.

ಅಮೃತ ನಗರೋತ್ಥಾನ ಯೋಜನೆಯ ಅಪ್ಪ-ಅಮ್ಮ ಯಾರೆಂದೆ ತಿಳಿಯುತ್ತಿಲ್ಲ.ಪುರಸಭೆಯ ಸದಸ್ಯರ ನಿಯೋಗವು ಜಿಲ್ಲಾಧಿಕಾರಿ,ಸಹಾಯಕ ಆಯುಕ್ತರನ್ನ ಭೇಟಿ ಮಾಡಿ ಸೋಮೇಶ್ವರದಲ್ಲಿ ಯೋಜನೆಯಡಿ ನಡೆದ ಕಾಮಗಾರಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಕೇಳುತ್ತೇವೆ.ಸೋಮೇಶ್ವರ ವ್ಯಾಪ್ತಿಯಲ್ಲಿ ಬಡವರಿಗೆ ಮನೆ ಕಟ್ಟಲು ಸರಕಾರಿ ಜಾಗವೇ ಇಲ್ಲ. ಪ್ರಭಾವಿಗಳು ಮೂವತ್ತು ಸೆಂಟ್ಸ್ ಸರಕಾರಿ ಜಾಗ ಅತಿಕ್ರಮಿಸಿ ಮನೆ ಕಟ್ಟಿದರೂ ಅದಕ್ಕೆ ಅಧಿಕಾರಿಗಳು ಹೇಗೆ ಡೋರ್ ನಂಬರ್ ನೀಡಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಉಪಾಧ್ಯಕ್ಷ ರವಿಶಂಕರ್ ಸಭೆಗೆ ತಿಳಿಸಿದರು

ವೈದ್ಯಕೀಯ ವೆಚ್ಚ ಪಾವತಿ ಮಾಡಲಾಗದವರಿಗೆ ಎಸ್ ಎಫ್ ಸಿ ನಿಧಿಯಡಿ ಸಹಾಯ ಧನ ನೀಡುವ ಬಗ್ಗೆ ಮುಖ್ಯಾಧಿಕಾರಿ ಮತಡಿ ಸಭೆಯಲ್ಲಿ ಪ್ರಸ್ತಾಪಿಸಿದಾಗ , ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಪುರುಷೋತ್ತಮ ಅವರು ವೈದ್ಯಕೀಯ ವೆಚ್ಚ ಪಾವತಿಸಲು ಆಗದವರಿಗೆ ಎಷ್ಟು ಮೊತ್ತ ಸಹಾಯ ಧನ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಕೋರಿದರು.

ಹುಲ್ಲು ಕಡ್ಡಿ ಸ್ವಚ್ಛತೆ ಬಗ್ಗೆ ಸದಸ್ಯ ದೀಪಕ್ ಪಿಲಾರ್ ಸಭೆಯಲ್ಲಿ ಪ್ರಸ್ತಾಪಿಸಿ ವಾರ್ಡ್ ಪ್ರಕಾರ ಹುಲ್ಲು ಸ್ವಚ್ಛ ಮಾಡುವ ಕೆಲಸ ಆಗಬೇಕು.ಒಂದೊಂದು ಕಡೆ ಅರ್ಧಂಬರ್ಧ ಕೆಲಸ ಮಾಡಿಸುವುದು ಬೇಡ. ಸ್ವಚ್ಛತೆ ನಾವು ಕಾಪಾಡಬೇಕು ಎಂದು ಸಭೆಗೆ ತಿಳಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News