ವಿದ್ಯಾನಗರ: ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Update: 2024-09-19 15:10 GMT

ಉಳ್ಳಾಲ: ಇಲ್ಲಿನ ನಗರಸಭಾ ವ್ಯಾಪ್ತಿಯ ವಿದ್ಯಾರಣ್ಯನಗರ ಬಡಾವಣೆಯ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಗಳನ್ನು ಒದಗಿಸುವ ಅಭಿವೃದ್ಧಿ ಕಾಮಗಾರಿಗಳನ್ನು ತಿಂಗಳ ಒಳಗಾಗಿ ಆರಂಭಿಸದಿದ್ದರೆ ಬಡಾವಣೆಯ ನಿವಾಸಿಗಳನ್ನು ಒಟ್ಟು ಸೇರಿಸಿ ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಟೆಂಟ್ ಹಾಕಿ ಪ್ರತಿಭಟಿಸಲಾಗುವುದೆಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಎಚ್ಚರಿಕೆ ನೀಡಿದ್ದಾರೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ವಿದ್ಯಾರಣ್ಯ ನಗರ ಬಡಾವಣೆಯ ನಿವಾಸಿಗಳಿಗೆ ಸಮರ್ಪಕ ರಸ್ತೆ,ಚರಂಡಿ,ನೀರು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಘಟಕದ ನೇತೃತ್ವದಲ್ಲಿ, ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಗುರುವಾರದಂದು ವಿದ್ಯಾರಣ್ಯ ನಗರ ಬಡಾವಣೆಯ ಪಾರ್ಕ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ವಿದ್ಯಾರಣ್ಯ ನಗರ ತುಂಬಾ ಹಳೆಯ ಬಡಾವಣೆಯಾಗಿದ್ದು ಇಲ್ಲಿ 40 ರಿಂದ 50 ಮನೆಗಳಿವೆ .ಪ್ರತಿಷ್ಠಿತರು ಪದೇಶದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಅನೇಕ ವರುಷಗಳಿಂದ ಇಲ್ಲಿನ ನಿವಾಸಿಗಳು ಮೂಲ ಸೌಕರ್ಯಗಳಾದ ರಸ್ತೆ, ನೀರು ಹಾಗೂ ನೈರ್ಮಲ್ಯದ ಕೊರತೆ ಎದುರಿಸುತ್ತಿದ್ದಾರೆ. ಮುಖ್ಯ ರಸ್ತೆಗಳೇ ತೀರಾ ಹದಗೆಟ್ಟಿದ್ದು ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬುವುದರಿಂದ ವಾಹನಗಳು ಹಾಗೂ ಇಲ್ಲಿನ ನಿವಾಸಿಗಳಿಗೆ ಸಂಚರಿಸಲು ಕಷ್ಟವಾಗುತ್ತಿದೆ.ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ತುಂಬಿ ಹರಿದು ರಸ್ತೆ ಹದಗೆಡುವುದಲ್ಲದೆ ಮನೆಗಳಿಗೂ ನೀರು ನುಗ್ಗುತ್ತಿದೆ.ರಸ್ತೆಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು ನಗರಸಭೆಯು ಇದರ ವಿರುದ್ಧ ಶೀಘ್ರನೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರ ಮಂಡಳಿಯ ಜೊತೆ ಕಾರ್ಯದರ್ಶಿ ಜ್ಯೋತಿಕಾ ಜೈನ್, ಸಂಘಟನಾ ಕಾರ್ಯದರ್ಶಿ ಮತ್ತು ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಳ್ಳಾಲ ತಾಲೂಕು ಘಟಕದ ಗೌರವಾಧ್ಯಕ್ಷ ಶೇಖ್ ಬಾವ, ಪ್ರಧಾನ ಕಾರ್ಯದರ್ಶಿ ಸುಕೇಶ್. ಜಿ ಉಚ್ಚಿಲ, ಸಂಘಟನಾ ಕಾರ್ಯದರ್ಶಿ ಯಶುಪಕ್ಕಳ, ಪ್ರಮುಖರಾದ ಅಝೀಝ್ ಉಳ್ಳಾಲ್, ರಹಮತುಲ್ಲಾ, ಬಾಲಚಂದ್ರ,ತನ್ವೀರ್, ಅಡ್ವಕೇಟ್ ಕೆ.ಸಿ ನಾರಾಯಣನ್, ಡಾ.ಸುಧೀರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News