ಮುಲ್ಕಿ| ದರೋಡೆ ಪ್ರಕರಣ: ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಸೇರಿ ಮೂವರು ಆರೋಪಿಗಳ ಬಂಧನ

Update: 2024-09-19 16:04 GMT

ಮುಲ್ಕಿ:  ಉದ್ಯಮಿ ಐಕಳ ಹರೀಶ್‌ ಶೆಟ್ಟಿ ಅವರ ಮನೆ ದರೋಡೆ ಪ್ರಕರಣದ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಸಿದ್ದಕಟ್ಟೆ ನಿವಾಸಿ ಹುಸೈನಬ್ಬ ಯಾನೆ ಸುಹೈಲ್ (33), ಕೊಲ್ನಾಡು ನಿವಾಸಿ ಝುಬೈರ್‌ ಹಾಗೂ ಕಾಸರಗೋಡು ನಿವಾಸಿ ಕಲಾಮ್‌ ಎಂದು ತಿಳಿದು ಬಂದಿದೆ.

ಈ ಪೈಕಿ ಸುಹೈಲ್ ಹಾಗೂ ಝುಬೈರ್‌ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಕಲಾಮ್‌ ಆರೋಪಿಗಳು ತಲೆ ಮರೆಸಿಕೊಳ್ಳು ನಕಲಿ ಪಾಸ್‌ ಪೋರ್ಟ್‌ ಮಾಡಿಸಿಕೊಟ್ಟ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ನಕಲಿ ಪಾಸ್‌ ಪೋರ್ಟ್‌, ಮೊಬೈಲ್‌ ಫೋನ್‌, ಪಿಸ್ತೂಲು, ಸಜೀವ ಮದ್ದುಗುಂಡುಗಳು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು 2023ರಲ್ಲಿ ಉದ್ಯಮಿ ಹರೀಶ್‌ ಶೆಟ್ಟಿ ಐಕಳ ಅವರ ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಕಾಸರಗೋಡು ನಿವಾಸಿ ಕಲಾಮ್‌ನ ಸಹಕಾರದಲ್ಲಿ ನಕಲಿ ಪಾಸ್‌ ಪೋರ್ಟ್‌ ಮಾಡಿಸಿಕೊಂಡು ವಿದೇಶಕ್ಕೆ ತೆರಳಿ ಅಲ್ಲಿ ತಲೆ ಮರೆಸಿಕೊಂಡಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಆರೋಪಿಗಳು ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಲ್ನಾಡು ಕೋರ್ದಬ್ಬು ದೈವಸ್ಥಾನ ಬಳಿ ಮುಲ್ಕಿ ಸುಂದರ್‌ರಾಮ ಶೆಟ್ಟಿ ಸಭಾಭವನದ ಬಳಿ ಇರುವುದನ್ನು ಖಚಿತ ಪಡಿಸಿಕೊಂಡ ಸಿಸಿಬಿ ಎಸಿಪಿ ಮನೋಜ್‌ ಕುಮಾರ್‌ ನಾಯಕ್‌ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ, ಮುಲ್ಕಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಮುಲ್ಕಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬುಧವಾರ ಸಿಸಿಬಿ ಪೊಲೀಸರು ಮತ್ತಿಬ್ಬರನ್ನು ಬಂದಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 5ಕ್ಕೇರಿದೆ.

ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News