ಕನ್ನಡ ಸಾಹಿತ್ಯ ಸಮ್ಮೇಳನ ಊರ ಹಬ್ಬವಾಗಲಿ: ಸ್ಪೀಕರ್ ಯು.ಟಿ.ಖಾದರ್
ಕೊಣಾಜೆ; ಸಾಹಿತ್ಯವು ನಮ್ಮ ಪರಂಪರೆ,ಸಂಸ್ಕೃತಿಯ ಪ್ರತೀಕವಾಗಿದೆ. ಉಳ್ಳಾಲ ತಾಲೂಕಿನಲ್ಲಿ ಮೊದಲ ಬಾರಿಗೆ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಕೂಡುವಿಕೆ ಮತ್ತು ಸಹಕಾರದೊಂದಿಗೆ ಊರ ಹಬ್ಬವಾಗಿ ಆಚರಿಸೋಣ ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.
ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಫೆ. 21ಮತ್ತು 22 ರಂದು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿರುವ 27 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಗುರುವಾರ ಕೊಣಾಜೆಯ ಮಂಗಳೂರು ವಿವಿಯ ಆಡಳಿತಸೌಧದಲ್ಲಿರುವ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಡೀ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮದ ಆಯೋಜನೆ ಮಾಡುವ ಉದ್ದೇಶವಿದ್ದು, ಇದರ ಜೊತೆಗೆ ಪುಸ್ತಕ ಮೇಳ ಸೇರಿದಂತೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ಸೇರಿದಂತೆ ಒಟ್ಡು ಕಾರ್ಯಕ್ರಮದ ರೂಪುರೇಷೆ ಗಳನ್ನು ಸಿದ್ದಪಡಿಸಬೇಕಿದೆ. ಉಳ್ಳಾಲ ತಾಲೂಕಿನ ಶಾಲೆಗಳ ವಿದ್ಯಾರ್ಥಿಗಳು ಮಾತ್ರವಲ್ಲ ಹೊರಗಿನ ತಾಲೂಕಿನ ವಿದ್ಯಾರ್ಥಿಗಳಿಗೂ ಸಮ್ಮೇಳನಕ್ಕೆ ಅವಕಾಶ ಕೊಡಬೇಕಿದೆ. ಒಟ್ಡಿನಲ್ಲಿ ಜಿಲ್ಲಾ ಸಮ್ಮೇಳನವು ಕನ್ನಡ ನಾಡು ನುಡಿಯ ಬಗೆಗೆ ಅಭಿಮಾನ ಹುಟ್ಟಿಸುವಂತಾಗಬೇಕು. ಇದು ಯಶಸ್ವಿಯಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ವಿವಿ ಕುಲಸಚಿವ ಕೆ. ರಾಜು ಮೊಗವೀರ ಅವರು ಸಭೆಯಲ್ಲಿ ಸಮ್ಮೇಳನದ ತಯಾರಿಯ ಕುರಿತು ಸಲಹೆ ಸೂಚನೆ ನೀಡಿ ಮಂಗಳೂರು ವಿವಿ ಸಕಲ ಸಹಕಾರ ನೀಡುವುದಾಗಿ ಹೇಳಿದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಅವರು ಮಾತನಾಡಿ, ಉಳ್ಳಾಲ ತಾಲೂಕು ಇತ್ತೀಚೆಗೆಯಷ್ಟೇ ರಚನೆಯಾಗಿದೆ. ಸಮ್ಮೇಳನದ ಪೂರ್ವಭಾವಿ ಸಭೆಗೆ ತಾಲೂಕಿನ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಆದ್ದರಿಂದ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಈಶ್ವರ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್, ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ, ಉಳ್ಳಾಲ ಕಸಾಪ ಕಾರ್ಯದರ್ಶಿ ರವೀಂದ್ರ ರೈ ಹರೇಕಳ,ಸಂಘಟನಾ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ದೇರಳಕಟ್ಟೆ, ಪುಷ್ಪರಾಜ್ ಮಂಗಳೂರು , ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ್ ರೇವಣ್ ಕರ್ ಹೋಬಳಿ ಅಧ್ಯಕ್ಷರು ವಿಜಯಲಕ್ಷ್ಮಿ ರೈ, ರೇಮಂಡ್ ಡಿಕುನ್ಹಾ, ಸುರೇಶ್ ಭಟ್ನಗರ್ ಧಾರ್ಮಿಕ ಪರಿಷತ್ತು ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಣಾಜೆ ವಲಯ ಮೇಲ್ವಿಚಾರಕರು ಮಾಧವ, ಜನ ಸೇವಾ ಟ್ರಸ್ಟ್ ಕೃಷ್ಣ ಮೂಲ್ಯ, ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷರು ಸುರೇಖಾ ಚಂದ್ರಹಾಸ್, ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ವಿದ್ಯಾರತ್ನ ಸಂಸ್ಥೆ ಅಧ್ಯಕ್ಷರು ರವೀಂದ್ರ ಶೆಟ್ಟಿ ಉಳಿದೊಟ್ಟು, ಕಡೆಂಜ ಸೋಮಶೇಖರ ಚೌಟ,ಪ್ರೊ.ಸೋಮಣ್ಣ, ಪ್ರೊ.ನಾಗಪ್ಪಗೌಡ, ಪ್ರೊ.ಪ್ರಶಾಂತ್ ನಾಯ್ಕ್, ಪರಿಸರ ಪ್ರೇಮಿ ಮಾಧವ ಉಳ್ಳಾಲ ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕೇತರ ಸಿಬ್ಬಂದಿಗಳು, ಪಂಚಾಯತ್ ಗಳ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಮಾಜಿ ತಾಲೂಕು ಪಂಚಾಯತ್ ಸದಸ್ಯರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯ ದರ್ಶಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೆಶಕರಾದ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ನಾವು ಬದುಕನ್ನು ಕಟ್ಡಿಕೊಂಡಿರುವುದು ಕನ್ನಡದ ನೆಲದಲ್ಲಿ. ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ನಮ್ಮ ಋಣಭಾರವಿದೆ. ಫೆಬ್ರವರಿ 21ಮತ್ತು 22 ರಂದು ಮಂಗಳೂರು ವಿವಿಯಲ್ಲಿ ನಡೆಯುವ ಕನ್ನಡದ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ತಿಳಿಸಿದ್ದಾರೆ.