ಕಸಬಾ ಬೆಂಗ್ರೆಯಲ್ಲಿ ಕೃತಕ ನೆರೆ: ನೆರವಿಗೆ ಡಿವೈಎಫ್ಐ ಆಗ್ರಹ

Update: 2024-07-19 09:00 GMT

ಮಂಗಳೂರು, ಜು. 19: ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಇನ್ನೊಂದೆಡೆ ಸಾಗರಮಾಲ ಯೋಜನೆಯ ಕೋಸ್ಟಲ್ ಬರ್ತ್ ಕಾಮಗಾರಿಯ ಕಾರಣ ಕಸಬಾ ಬೆಂಗ್ರೆ ಪ್ರದೇಶದ ನದಿ ತೀರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಇಲ್ಲಿನ ಸಹರಾ ಶಾಲೆಯ ಆವರಣ ಗೋಡೆಯ ಒಳಭಾಗಗಳಲ್ಲಿ ಮಳೆಹೆಚ್ಚು ಬಂದಾಗೆಲ್ಲಾ ಮಳೆ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಿವೈಎಫ್ಐ ಬೆಂಗ್ರೆ ಘಟಕ ಆರೋಪಿಸಿದೆ.

ಯೋಜನೆಯ ವತಿಯಿಂದ ನೀರು ಹರಿದು ಹೋಗಲು ಪೂರ್ಣ ಪ್ರಮಾಣದಲ್ಲಿ ವ್ಯವಸ್ಥೆ ಮಾಡದ ಕಾರಣ ತಗ್ಗು ಪ್ರದೇಶದಲ್ಲಿ ನೀರು ಶೇಖರಣೆಯಾಗುತ್ತಿದೆ. ಕೆಲ ಸಮಯದ ಹಿಂದೆ ಈ ಬಗ್ಗೆ ಬಂದರು ಇಲಾಖೆಯ ಸಹ ಕಾರ್ಯ ನಿರ್ವಾಹಕ ಪ್ರವೀಣ್ ಅವರ ಗಮನಕ್ಕೆ ತರಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಸಹರಾ ಶಾಲೆಯ ಆವರಣ ಗೋಡೆಯ ಒಳಭಾಗಕ್ಕೆ ಮರಳು ಹಾಕಿ ಕೊಡುವುದಾಗಿ ತಿಳಿಸಿದ್ದಾರೆ. ಮತ್ತೆ ಪೂರ್ಣಪ್ರಮಾಣದಲ್ಲಿ ನೀರು ಹೋಗಲು ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಆದರೆ, ನಿನ್ನೆ ತುಂಬೆ ಹಾಗೂ ಹರೇಕಳ ಅಣೆಕಟ್ಟುಗಳ ಗೇಟು ತೆರೆದಿರುವುದರಿಂದ ನದಿಭಾಗದ ಪ್ರದೇಶಗಳಲ್ಲಿ ನೀರು ಹೆಚ್ಚಾಗಿದೆ. ಸ್ವಾಭಾವಿಕವಾಗಿ ನೀರು ಹೆಚ್ಚು ಬಿಟ್ಟ ಸಂಧರ್ಭಗಳಲ್ಲಿ ತಗ್ಗು ಪ್ರದೇಶಕ್ಕೆ ನೀರು ಹರಿಯುತ್ತದೆ. ಹೊಸ ಬಲೆಗಳನ್ನು ಎಲ್ಲಾ ಮಾಡಿ ದುಡಿಯಲು ಸಾಧ್ಯವಾಗದೇ ಸರಿಯಾಗಿ ದುಡಿಮೆ ಇಲ್ಲದೆ ನದಿ ದೋಣಿಗಳನ್ನು ಕಟ್ಟಿ ಇಡುವ ಸ್ಥಿತಿಯೂ ಸ್ಥಳೀಯರದ್ದಾಗಿದೆ. ಒಂದೆಡೆ ಬೆಂಗ್ರೆ ಪ್ರದೇಶ ಮುಳುಗುವ ಭೀತಿಯಲ್ಲಿದೆ. ಜಿಲ್ಲಾಡಳಿತ ಕೂಡಲೇ ಜನರ ನೆರವಿಗೆ ಮುಂದಾಗಬೇಕು ಎಂದು ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ತಯ್ಯೂಬ್ ಬೆಂಗ್ರೆ ಮತ್ತು ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷ ಹನೀಫ್ ಬೆಂಗ್ರೆ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News