ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಮನೆ ಮೇಲೆ ದಾಳಿ ಪ್ರಕರಣ: ಐಟಿ ಅಧಿಕಾರಿಗಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2023-11-06 14:59 GMT

ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ

ಬೆಂಗಳೂರು, ನ.6: ಬೆಂಗಳೂರು ನಗರದ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಮನೆಯ ಮೇಲೆ 2013ರಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ದಾಖಲೆಗಳನ್ನು ಒಂದು ದಶಕ ಕಳೆದರೂ ಹಿಂದಿರುಗಿಸದೇ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಏಕ ಸದಸ್ಯ ನ್ಯಾಯಪೀಠವು ವ್ಯಕ್ತಪಡಿಸಿದ್ದ ಕಟು ಮಾತುಗಳನ್ನು ರದ್ದುಪಡಿಸುವಂತೆ ಕೋರಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ ವಿಭಾಗೀಯ ಪೀಠ ವಜಾಗೊಳಿಸಿ ಆದೇಶಿಸಿದೆ.

ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕರು ಹಾಗೂ ಪ್ರಧಾನ ಆಯುಕ್ತರು ಸಲ್ಲಿಸಿದ್ದ ತಕರಾರು ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.

ರಾಜ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2013ರ ಮೇ 4ರಂದು ಚಂದ್ರಶೇಖರ ಸ್ವಾಮೀಜಿ ಮನೆ ಮೇಲೆ ದಾಳಿ ನಡೆಸಿ, ಹಲವು ದಾಖಲೆ ವಶಪಡಿಸಿಕೊಂಡಿದ್ದರು. ಅದಾಗಿ ಒಂದು ದಶಕ ಕಳೆದರೂ ದಾಖಲೆಗಳನ್ನು ಸ್ವಾಮೀಜಿಗೆ ಹಸ್ತಾಂತರಿಸಲಿಲ್ಲ. ಇದರಿಂದ 2023ರ ಜೂ.28ರಂದು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದ ಸ್ವಾಮೀಜಿ, ತಮ್ಮಿಂದ ವಶಪಡಿಸಿಕೊಂಡಿರುವ ದಾಖಲೆಗಳನ್ನು ಹಿಂದಿರುಗಿಸಲು ಆದಾಯ ತೆರಿಗೆ ಇಲಾಖೆಗೆ ನಿರ್ದೇಶಿಸುವಂತೆ ಕೋರಿದ್ದರು.

ಅರ್ಜಿ ಸಂಬಂಧ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠವು ಆದಾಯ ತೆರಿಗೆ ಇಲಾಖೆ ಮಹಾ ನಿರ್ದೇಶಕರು, ಪ್ರಧಾನ ಆಯುಕ್ತರು, ಹೆಚ್ಚುವರಿ ಆಯುಕ್ತರು ಮತ್ತು ಉಪ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತ್ತು. ಇದರಿಂದ ಅರ್ಜಿಯು 2023ರ ಆ.30ರಂದು ವಿಚಾರಣೆಗೆ ಬಂದಾಗ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೆಮೊ ಸಲ್ಲಿಸಿ 2013ರ ಮೇ 4ರಂದು ದಾಳಿ ನಡೆಸಿದ ಸಂದರ್ಭದಲ್ಲಿ ಚಂದ್ರಶೇಖರ ಸ್ವಾಮೀಜಿ ಮನೆಯಿಂದ ವಶಪಡಿಸಿಕೊಂಡ ದಾಖಲೆಗಳನ್ನು ಹಿಂದಿರುಗಿಸಲಾಗಿದೆ. ಹೀಗಾಗಿ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.

ಈ ಹೇಳಿಕೆ ದಾಖಲಿಸಿಕೊಂಡ ಏಕ ಸದಸ್ಯ ನ್ಯಾಯಪೀಠ, ಕೆಲ ನಿರ್ದಿಷ್ಟ ಸಮಯದವರೆಗೆ ಮಾತ್ರ ದಾಖಲೆಗಳನ್ನು ತಮ್ಮ ವಶದಲ್ಲಿ ಇರಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅವಕಾಶವಿದೆ. 2013ರಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು 10 ವರ್ಷ ಕಳೆದರೂ ಹಿಂದಿರುಗಿಸದೇ ಸ್ವಾಮೀಜಿಗೆ ಬಹಳ ತೊಂದರೆ ನೀಡಲಾಗಿದೆ. ಆ ಮೂಲಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಪ್ಪು ಎಸಗಿದ್ದಾರೆ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ಇತ್ಯರ್ಥಪಡಿಸಿತು.

ಅಲ್ಲದೇ, ಆದೇಶದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಆದಾಯ ತೆರಿಗೆ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಮ್ಮ ಕುಂದುಕೊರತೆಯ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ಸ್ವಾಮೀಜಿಗೆ ಯಾವುದೇ ರೀತಿಯಲ್ಲೂ ಅಡ್ಡಬರುವುದಿಲ್ಲ. ಆ ನಿಟ್ಟಿನಲ್ಲಿ ಎಲ್ಲ ಅಂಶಗಳನ್ನು ಮುಕ್ತವಾಗಿ ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿತು.

ಇದರಿಂದ ವಿಭಾಗೀಯ ಪೀಠಕ್ಕೆ ಆದಾಯ ತೆರಿಗೆ ಮೇಲ್ಮನವಿ ಸಲ್ಲಿಸಿತ್ತು. ತನ್ನ ಅಧಿಕಾರಿಗಳ ವಿರುದ್ಧದ ಕುಂದುಕೊರತೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಚಂದ್ರಶೇಖರ ಸ್ವಾಮೀಜಿ ಅವರಿಗೆ ಅವಕಾಶ ಕಾಯ್ದಿರಿಸಿದ ಏಕ ಸದಸ್ಯ ಪೀಠದ ಆದೇಶದ ರದ್ದುಪಡಿಸಬೇಕು. ಹಾಗೆಯೇ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ವ್ಯಕ್ತಪಡಿಸಿದ ಕಟು ಅಭಿಪ್ರಾಯಗಳನ್ನು ತೆಗೆದುಹಾಕಬೇಕು ಎಂದು ಕೋರಿದ್ದರು. ಈ ಮನವಿಯನ್ನು ವಿಭಾಗೀಯ ಪೀಠ ತಿರಸ್ಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News