ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಜನಾಗ್ರಹ ಸಭೆ

Update: 2024-08-19 12:21 GMT

ಬೆಳ್ತಂಗಡಿ: ದ.ಕ. ಜಿಲ್ಲೆಯಲ್ಲಿ ಹೈವೇ ಮಾಫಿಯಾವೊಂದು ಕೆಲಸ ಮಾಡುತ್ತಿದೆ ಯಾವುದೇ ಕಂಪೆನಿಗಳು ಕಾಮಗಾರಿ ನಡೆಸಲು ಬಂದರೂ ಅವರನ್ನು ಓಡಿಸುವುದರ ಹಿಂದೆ ಈ ಮಾಫಿಯಾ ಕೆಲಸ‌ ಮಾಡುತ್ತಿದೆ. ಪೂಂಜಾಲಕಟ್ಟೆ ಚಾರ್ಮಾಡಿ ಹೆದ್ದಾರಿ ಕಾಮಗಾರಿಯಲ್ಲಿಯೂ ಇದೇ ನಡೆದಿದೆ. ಈ ಮಾಫಿಯಾವನ್ನು ಜನರೆದುರಿಗೆ ತರುವ ಕಾರ್ಯವನ್ನು ಮಾಡುತ್ತೇವೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ, ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.

ಅವರು ಬೆಳ್ತಂಗಡಿಯಲ್ಲಿ ಸೋಮವಾರ ಪೂಂಜಾಲಕಟ್ಟೆ ಚಾರ್ಮಾಡಿ ಹೆದ್ದಾರಿ ಕಾಮಗಾರಿಯಲ್ಲಿ ಆಗಿರುವ ಅವ್ಯವಸ್ಥೆಗಳ ಹಾಗೂ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.

ಕಾಮಗಾರಿಯ ಗುತ್ತಿಗೆ ಪಡೆದ ಡಿ.ಪಿ ಜೈನ್ ಕಂಪೆನಿಯವರು ಯಾಕೆ ಕಾಮಗಾರಿಯನ್ನು ಬಿಟ್ಟು ಹೋದರು ಎಂಬುದನ್ನು ಜನತೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಹೆದ್ದಾರಿ ಕಾಮಗಾರಿಯ ಅವ್ಯವಹಾರದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರೂ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದ ಅವರು ಶಾಸಕ ಹರೀಶ್ ಪೂಂಜ ಅವರು ಡಿ.ಪಿ ಜೈನ್ ಕಂಪೆನಿಯ ಮುಂದೆ ಐದು ಕೋಟಿಯ ಬೇಡಿಕೆಯಿಟ್ಟಿರುವ ಮಾಹಿತಿ ಇದೀಗ ಲಭ್ಯವಾಗುತ್ತಿದೆ ಎಂದು ಆರೋಪಿಸಿ ದರು. ಕೋಟ್ಯಂತರ ಹಣ ಹಾಕಿ ಕೆಲಸ‌ಮಾಡಿಸುವ ಕಂಪೆನಿಗೆ ಮಂಗಳೂರಿನಲ್ಲಿ ಮಳೆ ಬರುತ್ತದೆ ಎಂಬುದು ಗೊತ್ತಿಲ್ಲ ಎಂದರೆ ಅದನ್ನು ಇಲ್ಲಿನ‌ ಜನ ನಂಬಬೇಕೆ ಎಂದು ಅವರು ಪ್ರಶ್ನಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸಮರ್ಪಕವಾಗಿ ಕಾಲಮಿತಿಯಲ್ಲಿ ನಿರ್ಮಿಸಿಕೊಡಬೇಕು ಅದಕ್ಕಾಗಿ ಯಾವ ಹೋರಾಟಕ್ಕೂ ಸಂಘಟನೆ ಸಿದ್ದವಾಗಿದೆ ಎಂದರು. ಹೆದ್ದಾರಿ ಕಾಮಗಾರಿಗಾಗಿ ಅಲ್ಲಲ್ಲಿ ಅಗೆದು ಹಾಕಿದ್ದಾರೆ ಆದರೆ ಈಗಾಗಲೇ 106 ಕೋಟಿ ಬಿಲ್ ಅನ್ನು ಡಿ‌ಪಿ ಜೈನ್ ಕಂಪೆನಿಗೆ ಪಾವತಿಯಾಗಿದೆ ಇದರ ಬಗ್ಗೆಯುತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಶಾಸಕರು ಒಂದು ರೂ ಮುಟ್ಟಿಲ್ಲ ಎಂದು ಪ್ರಮಾಣ ಮಾಡುತ್ತಿದ್ದಾರೆ ಆದರೆ ಅವರು ಕೋಟಿ ಕೋಟಿ ಹಣ ದೋಚಿದ್ದಾರೆ ಎಲ್ಲದಕ್ಕೂ ದೇವರ ಹೆಸರು ಹೇಳಿ ಪಲಾಯನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಅವರನ್ನು ಒಂದಲ್ಲ ಒಂದು ದಿನ ನ್ಯಾಯಾಲಯದ ಕಡಕಟ್ಟೆಯಲ್ಲಿ ನಿಲ್ಲಿಸುತ್ತೇವೆ ಎಂದರು.

ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆಯ ಸಲಹೆಗಾರ ಮುನೀರ್ ಕಾಟಿಪಳ್ಳ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಹೆದ್ದಾರಿ ಕಾಮಗಾರಿಗಳು ಸಮಯಬದ್ದವಾಗಿ ಗುಣಮಟ್ಟದಿಂದ ಆಗುತ್ತಿಲ್ಲ, ಇದಕ್ಕೆ ಕಾರಣವೇನು ಜಿಲ್ಲೆಯ ಸಂಸದರಾಗಿದ್ದವರ ವೈಫಲ್ಯದಿಂದ ಹೀಗಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಯಾವುದಾದರೂ ಕಾಮಗಾರಿ ಸರಿಯಾಗಿ ನಡೆದಿದ್ದರೆ ಸಂಸದರು ಹೇಳಲಿ, ಕೇವಲ ಧರ್ಮದ ಆಧಾರದಲ್ಲಿ ಚುನಾವಣೆ ಗೆಲ್ಲಬಹುದು ಎಂಬ ಸ್ಥಿತಿಯೇ ಇಲ್ಲಿನ ಅವ್ಯವಸ್ಥೆಗೆ ಮುಖ್ಯ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ ಗಳಲ್ಲಿ ಆಗುತ್ತಿರುವ ಅವ್ಯವಹಾರಗಳ ಬಗ್ಗೆ ಅವ್ಯವಸ್ಥೆಗಳ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸುವಂತೆ ಅವರು ಒತ್ತಾಯಿಸಿದರು. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಸಮಿತಿ ಕಾಮಗಾರಿಯ ಬಗ್ಗೆ ಕಣ್ಗಾವಲಿರಿಸಲಿದೆ ಎಂದರು.

ಪ್ರತಿಭಟನೆಯನ್ನು ಉದ್ಧೇಶಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ ಮಾತನಾಡಿ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಿಂದಲೇ ಅವ್ಯವಸ್ಥೆ ಆರಂಭಗೊಂಡಿದೆ, ಒಂದು ಕಿ‌.ಮೀ‌ ಕೆಲಸ‌ ಮಾಡದೆ ಹನ್ನೆರಡು ಕಿ.ಮೀ ಕಾಮಗಾರಿ ಆಗಿರುವುದಾಗಿ ತೋರಿಸಿ ಬಿಲ್ ಪಾಸ್ ಮಾಡಲಾಗಿದೆ, ಇದೀಗ ಶಾಸಕರು ಸಂಸದರು ಸೇರಿ ಬ್ಯಾಕ್ ಟು ಬ್ಯಾಕ್ ಟೆಂಡರ್, ಸಬ್ ಕಾಂಟ್ರಾಕ್ಟ್ ಹೆಸರು ಹೇಳಿ ಜನರನ್ನು ವಂಚಿಸುವ ಕಾರ್ಯ ನಡೆಯುತ್ತಿದೆ. ಶಾಸಕರೇ ಸಾಧ್ಯವಿದ್ದರೆ ಈ ಉಪ ಗುತ್ತಿಗೆಗಳ ದಾಖಲೆಗಳನ್ನು ಬಹಿರಂಗ ಗೊಳಿಸಿ ಎಂದು ಸವಾಲು ಹಾಕಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಪಟ್ಟಣ ಪಂಚಾಯತು ಸದಸ್ಯ ಜಗದೀಶ್ ಡಿ, ಸಿಪಿಐ ಮುಖಂಡ ಶೇಖರ ಬಿ ಮಾತನಾಡಿ ದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಸತೀಶ್ ಕಾಶೀಪಟ್ಣ, ಮುಖಂಡರುಗಳಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಉಮ್ಮರ್ ಕುಂಞಿ ಮುಸ್ಲಿಯಾರ್, ಇ ಸುಂದರ ಗೌಡ, ವಂಧನಾ ಭಂಡಾರಿ, ಶ್ರೀನಿವಾಸ ಕಿಣಿ, ಈಶ್ವರಿ ಪದ್ಮುಂಜ ಹಾಗೂ ಇತರರು ಉಪಸ್ಥಿತರಿದ್ದರು.

ಸಮಿತಿಯ ಕಾರ್ಯದರ್ಶಿ ಬಿ.ಎಂ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶ್ಯಾಮರಾಜ್ ಕಾರ್ಯಕ್ರಮ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗಿಗಳಾದರು.



 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News