ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ: ಪ್ರಿಯಾಂಕ್ ಖರ್ಗೆ

Update: 2023-11-15 15:40 GMT

ಮಂಗಳೂರು : ಲೋಕಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಖಾಲಿ ಆಗಲಿದ್ದು ಬಿಜೆಪಿಯಲ್ಲಿ ನಾಯಕರೇ ಇಲ್ಲ. ಇನ್ನು ಆ ಪಕ್ಷದಲ್ಲಿರುವವರಿಗೆ ರಕ್ಷಣೆ ಕೊಡುವವರು ಯಾರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ತತ್ವ ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್ ಸೇರ್ಪಡೆಯಾಗಬಹುದು. ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ನಮ್ಮ ನಾಯಕತ್ವ ಹುಡುಕಿಕೊಂಡು ಪಕ್ಷಕ್ಕೆ ಬರಲಿದ್ದಾರೆ ಎಂದರು. 

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯೇಂದ್ರ ಅವರಿಗೆ ಶುಭ ಹಾರೈಸುತ್ತೇನೆ. ಇದರಿಂದ ಕಾಂಗ್ರೆಸ್ ಮೇಲೆ ಎಫೆಕ್ಟ್ ಆಗುವುದು ನಿಜ, ಆದರೆ ಅದು ಒಳ್ಳೆಯ ಪರಿಣಾಮ ಎಂದರು.

ವಿಜಯೇಂದ್ರ ಅವರ ಆಯ್ಕೆ ಬೆನ್ನಲ್ಲೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಸಿ.ಟಿ.ರವಿ, ಯತ್ನಾಳ್, ಸುನಿಲ್ ಕುಮಾರ್ ಸಮಾರಂಭಕ್ಕೆ ಗಾಯಬ್ ಆಗಿದ್ದಾರೆ. ಇನ್ನು ಕೂಡ ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕಣ್ಣೀರು ಹಾಕಿಸಿ ಇಳಿಸಿದ್ದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ, ನಾಯಕತ್ವದ ಕೊರತೆ ಕಾರಣಕ್ಕೆ ಬಿಜೆಪಿ ವರಿಷ್ಠರು ವಿಜಯೇಂದ್ರ ಆಯ್ಕೆ ಮಾಡಿದ್ದಾರೆ ಎಂದರು.

ಬಿಜೆಪಿಯ ದೌರ್ಬಲ್ಯ ಬಳಸಿಕೊಂಡು ನಾವು ಲೋಕಸಭೆ ಚುನಾವಣೆ ತಂತ್ರ ರೂಪಿಸುವುದಿಲ್ಲ, ಕಾಂಗ್ರೆಸ್ ಪಕ್ಷದ ಬಲದ ಮೇಲೆ ತಂತ್ರ ಹೆಣೆಯುತ್ತೇವೆ. ಜನರಿಗೆ ಸ್ವಾಭಿಮಾನದ ಬದುಕು, ಸಂವಿಧಾನ ರಕ್ಷಣೆ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಇಂತಹ ಜನಪರ ವಿಚಾರಗಳನ್ನು ಇಟ್ಟು ಚುನಾವಣೆ ಎದುರಿಸುತ್ತೇವೆ. ಇದೇ ವಿಚಾರಗಳಿಂದಲೇ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಜಾತಿ ಲೆಕ್ಕಾಚಾರವೊಂದೇ ಚುನಾವಣೆ ಗೆಲುವಿಗೆ ಮಾನದಂಡ ಆಗಲಾರದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಆದ ನಿರ್ಲಕ್ಷಕ್ಕೆ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ ಎನ್ನುವುದು ಸರಿಯಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಯಾಕೆ ಎಂದು ಬಿಜೆಪಿಯವರೇ ಹೇಳಬೇಕು. ಅದಕ್ಕಿಂತ ಕಳೆದ ಬಿಜೆಪಿ ಸರಕಾರದ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ ಮುಂತಾದ ಕಾರಣಗಳಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಮೇಲ್ಮನೆ, ಕೆಳಮನೆಯಲ್ಲಿ ವಿಪಕ್ಷ ನಾಯಕರಿಲ್ಲ, ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ, ಬಜೆಟ್ ಭಾಷಣ ನಡೆದರೂ ಬಿಜೆಪಿ ನಾಯಕನ ಆಯ್ಕೆ ಆಗಿಲ್ಲ. ಇನ್ನು 15 ದಿನದಲ್ಲಿ ಬೆಳಗಾವಿ ಅಧಿವೇಶನ ಆರಂಭವಾಗುತ್ತದೆ. ವಿರೋಧ ಪಕ್ಷದ ನಾಯಕರು ಯಾರು? ಅಂತಹ ಯಾವುದೇ ನಾಯಕ ಬಿಜೆಪಿಯಲ್ಲಿ ಇಲ್ಲ ಎಂದರು.

ಜೆಡಿಎಸ್ ಕಚೇರಿ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್‌ಗೂ ಕಾಂಗ್ರೆಸ್‌ಗೆ ಸಂಬಂಧ ಇಲ್ಲ ಎಂದು ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ, ಅಂತಹ ಕೆಲಸ ಮಾಡಲು ನಮಗೆ ಬೇರೆ ಕೆಲಸ ಇಲ್ವಾ? ನಾವು ಆಡಳಿತ ನಡೆಸುತ್ತಾ ಇದ್ದೇವೆ. ಹಾಗೆ ಮಾಡಬೇಕು ಎಂದಾದರೆ ಪೇ ಸಿಎಂ ಕ್ಯಾಂಪೇನ್ ಮಾಡಿದಂತೆ ಮಾಡುತ್ತೇವೆ. ಅದೇನು ರಾತ್ರೋ ರಾತ್ರಿ ಹಾಕಿದ್ದಾ? ಎದೆ ತಟ್ಟಿ ಮುಂದೆ ಬಂದು ಬಹಿರಂಗವಾಗಿಯೇ ಭ್ರಷ್ಟಾಚಾರ ಆರೋಪ ಮಾಡುತ್ತೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡುವುದಿಲ್ಲ ಎಂದರು.

ಸಿಬ್ಬಂದಿಯಿಂದ ಕುಮಾರಸ್ವಾಮಿ ಮನೆಯಲ್ಲಿ ಏನು ಅಚಾತುರ್ಯ ನಡೆದಿದೆ ಎಂದು ನನಗೆ ಗೊತ್ತಿಲ್ಲ. ಕಾನೂನಾತ್ಮಕ ಕ್ರಮ ಕೈಗೊಳ್ಳಿ ಎಂದು ಅವರೇ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡಿದ್ದರು. ಎಲ್ಲರನ್ನೂ ಕತ್ತಲಲ್ಲಿ ಇರಿಸುತ್ತೀರಿ ಎಂದು ಅವರು ಹೆಚ್ಚು ಬೆಳಕು ತಗಳೋದು ಎಷ್ಟು ಸರಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News