ಅಡಿಕೆಗೆ ಎಳೆಕಾಯಿ ಉದುರುವಿಕೆ, ಕೊಳೆರೋಗ ಪರಿಹಾರಕ್ಕೆ ಕರ್ನಾಟಕ, ಕೇರಳ ಮುಖ್ಯಮಂತ್ರಿಗೆ ಕ್ಯಾಂಪ್ಕೊ ಆಗ್ರಹ
ಮಂಗಳೂರು: ಎಳೆಕಾಯಿ ಉದುರುವಿಕೆ ಮತ್ತು ಕೊಳೆರೋಗಕ್ಕೆ ಕಂಗಾಲಾದ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡು ವಂತೆ ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೊ ಮನವಿ ಮಾಡಿದೆ.
ಬೇಸಗೆಯಲ್ಲಿ ಬಿಸಿಲ ಬೇಗೆಗೆ ಬೆಂದು ಬಸವಳಿದ ಅಡಿಕೆ ಬೆಳೆಗಾರ, ಮುಂಗಾರಿನ ಅರ್ಭಟಕ್ಕೆ ಅಡಿಕೆಗೆ ತಗುಲಿದ ಮಹಾಮಾರಿ ಕೊಳೆರೋಗದ ಆಘಾತದಿಂದಾಗಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಘೋಷಿಸುವಂತೆ ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಯವರಿಗೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ ಕೊಡ್ಗಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹವಾಮಾನ ವೈಫರೀತ್ಯಗಳಿಂದ ಭೂ ತಾಪಮಾನ ಹೆಚ್ಚಾಗಿ ಎಪ್ರಿಲ್ -ಮೇ ತಿಂಗಳಲ್ಲಿ ಅಡಿಕೆ ಕಾಯಿ ಉದುರುವಿಕೆ ಯಿಂದಾಗಿ ಅರ್ಧಕ್ಕರ್ಧ ಬೆಳೆ ನಾಶವಾಗಿತ್ತು. ಲಕ್ಷಾಂತರ ರೂ. ಹಣ ವ್ಯಯಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಬೆಳೆ ರಕ್ಷಣೆ ಮಾಡಲು ಹೆಣಗಾಡಿದ ರೈತನಿಗೆ ಈಗ ತೀವ್ರತರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಳಿದುಳಿದ ಅಡಿಕೆ ಮರಕ್ಕೆ ಕೊಳೆರೋಗ ಹರಡಿರುವುದು ಆಘಾತ ನೀಡಿದೆ.ಅವರ ಬಾಳನ್ನು ನರಕಸದೃಶವಾಗಿಸಿದೆ. ಇದರಿಂದ ಜೀವನಾಧಾರವೇ ಕುಸಿದು ಬೆಳೆಗಾರರ ಜೀವನೋತ್ಸಾಹ ಕುಗ್ಗಿ ಹೋಗಿದೆ ಎಂದು ಕೂಡ್ಗಿ ಹೇಳಿದ್ದಾರೆ.
ಕ್ಯಾಂಪ್ಕೊ ಮತ್ತು ಇತರ ಸಹಕಾರಿ ಸಂಸ್ಥೆಗಳು ಸರ್ವ ಪ್ರಯತ್ನಗಳ ಮೂಲಕ ಕೆ.ಜಿ ಗೆ 400 ರೂಪಾಯಿಗಳ ಅಸುಪಾಸಿ ನಲ್ಲಿ ಅಡಿಕೆಯ ದರವನ್ನು ಸ್ಥಿರೀಕರಿಸಿ ರೈತರ ಬೆಂಬಲಕ್ಕೆ ನಿಂತಿವೆ. ಆದರೂ, ಅಡಿಕೆ ಕೃಷಿಗೆ ತಗುಲಿದ ಅಡಿಕೆ ಉದುರು ವಿಕೆ ಮತ್ತು ಕೊಳೆರೋಗ ಬಾಧೆಯಿಂದ ಬೆಳೆ ನಷ್ಟವಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಬೆಳೆಗಾರರದ್ದಾಗಿದೆ. ರೈತರ ಸಮಸ್ಯೆಗಳಿಗೆ ಸದಾ ಮಿಡಿಯುತ್ತಿರುವ ಮುಖ್ಯಮಂತ್ರಿಯವರ ಸಹಾಯ ಹಸ್ತಕ್ಕಾಗಿ ಅಡಿಕೆ ಬೆಳೆಗಾರರು ಎದುರು ನೋಡುತ್ತಿದ್ದಾರೆ.
ರೈತರನ್ನು ಈ ದಯನೀಯ ಸ್ಥಿತಿಯಿಂದ ಪಾರು ಮಾಡಲು, ರಾಜ್ಯದಲ್ಲಿ ಅಡಿಕೆ ಬೆಳೆ ನಾಶದ ಬಗ್ಗೆ ತುರ್ತು ಸಮೀಕ್ಷೆ ನಡೆಸು ವಂತೆ ಸಂಬಂಧ ಪಟ್ಟ ಇಲಾಖೆಗೆ ನಿರ್ದೇಶನ ಆ ಪ್ರಕಾರ ಅಡಿಕೆ ಕೃಷಿಕರಿಗೆ ಪರಿಹಾರ ಘೋಷಣೆ ಮಾಡುವಂತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯ ಮಂತ್ರಿಯವರಲ್ಲಿ ಕ್ಯಾಂಪ್ಕೊ ವಿನಂತಿ ಮಾಡಿದೆ ಎಂದು ಅಧ್ಯಕ್ಷ ಎ.ಕಿಶೋರ್ ಕುಮಾರ ಕೊಡ್ಗಿ ತಿಳಿಸಿದ್ದಾರೆ.