ಡಿ.23ರಂದು ಐವನ್ ಡಿಸೋಜ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆ
ಮಂಗಳೂರು, ಡಿ.17: ಕಳೆದ 9 ವರ್ಷಗಳಿಂದ ಸರ್ವ ಧರ್ಮಗಳ ದೀಪಾವಳಿ, ಕ್ರಿಸ್ಮಸ್, ರಮಝಾನ್ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿರುವ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ನೇತೃತ್ವದಲ್ಲಿ ಈ ವರ್ಷ 10ನೇ ವರ್ಷದ ಸರ್ವ ಧರ್ಮ ಕ್ರಿಸ್ಮಸ್ ಸಂಭ್ರಮಾಚರಣೆ, ಕ್ರಿಸ್ಮಸ್ ಕ್ಯಾರಲ್ ಸಂಗೀತ ಸ್ಪರ್ಧೆ ಡಿ.23ರಂದು ಉಳ್ಳಾಲ ಆಡಂಕುದ್ರುವಿನ ಸೀ-ಬಾಂಕ್ವಿಟ್ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಕ್ರಮದ ಸಂಚಾಲಕ ನಾಗೇಂದ್ರ ಕುಮಾರ್, ಅಂದು ಅಪರಾಹ್ನ 2:30ರಿಂದ ಕ್ಯಾರಲ್ ಸಂಗೀತ ಸ್ಪರ್ಧೆ- 2024ಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಸರ್ವ ಧರ್ಮಗಳ ಕ್ರಿಸ್ಮಸ್ ಸಂಗಮದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ಧರ್ಮಪ್ರಾಂತ್ದ ಧರ್ಮಾಧ್ಯಕ್ಷ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಶಾಂತಿ ಪ್ರಕಾಶನದ ಆಡಳಿತ ನಿರ್ದೇಶಕ ಮುಹಮ್ಮದ್ ಕುಂಞಿ, ಶ್ರೀ ಗುರು ಸಿಂಗ್ ಸಭಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಸರ್ದಾರ್ ಇಕ್ಬಾಲ್ ಸಿಂಗ್ ರಾಥೋರ್, ಪೆರ್ಮನ್ನೂರಿನ ಸೈಂಟ್ ಸೆಬೆಸ್ಟಿಯನ್ ಚರ್ಚಿನ ಧರ್ಮಗುರು ರೆ.ಫಾ. ಸಿಪ್ರಿಯನ್ ಪಿಂಟೊ ಕ್ರಿಸ್ಮಸ್ ಸಂದೇಶ ನೀಡಲಿದ್ದಾರೆ ಎಂದರು.
ಕ್ರಿಸ್ಮಸ್ ಸೌಹಾರ್ದದ ಅಂಗವಾಗಿ ಕ್ಯಾರಲ್ ಸಂಗೀತ ಸ್ಪರ್ಧೆ, ಏಕವ್ಯಕ್ತಿ ಗಾಯನ (ಸೋಲೊ) ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಇದೇ ವೇಳೆ ಕ್ರಿಸ್ಮಸ್ ಸಹಭೋಜನ ಏರ್ಪಡಿಸಲಾಗುವುದು ಎಂದು ನಾಗೇಂದ್ರ ಕುಮಾರ್ ತಿಳಿಸಿದರು.
ಕ್ಯಾರಲ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರಥಮ 25 ಸಾವಿರ ರೂ., ದ್ವಿತೀಯ 15 ಸಾವಿರ ರೂ., ಮತ್ತು ತೃತೀಯ 10 ಸಾವಿರ ರೂ., ಏಕವ್ಯಕ್ತಿ ಸಂಗೀತ ಸ್ಪರ್ಧೆಗೆ ಕ್ರಮವಾಗಿ 3 ಸಾವಿರ ರೂ., 2 ಸಾವಿರ ರೂ., ತೃತೀಯ 1 ಸಾವಿರ ರೂ., ನಗದು ಬಹುಮಾನ ನೀಡಲಾಗುವುದು. ಅಲ್ಲದೆ, ಭಾಗವಹಿಸಿರುವ ಎಲ್ಲ ಸ್ಪರ್ಧಾಳುಗಳಿಗೆ ಪ್ರೋತ್ಸಾಹಕ ಬಹುಮಾನ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎನ್.ಪಿ. ಮನುರಾಜ್, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಅಲಿಸ್ಟನ್ ಡಿಕುನ್ಹಾ, ಮೀನಾ ಟೆಲ್ಲಿಸ್, ಅಮರನಾಥ್, ಆನಂದ್ ಸೋನ್ಸ್ ಉಪಸ್ಥಿತರಿದ್ದರು.