ಅಲ್ಪಸಂಖ್ಯಾತರ ಯೋಜನೆಗಳ ಅರಿವು ಮೂಡಿಸಲು ಆಯೋಗ ಸೂಚನೆ
ಮಂಗಳೂರು,ಅ.16: ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗಾಗಿ ರೂಪಿಸುವ ಸರಕಾರಿ ಯೋಜನೆಗಳು ಜನ ಸಾಮಾನ್ಯರಿಗೆ ತಲುಪುತ್ತಿಲ್ಲ. ಹಾಗಾಗಿ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಅರಿವು ಮೂಡಿಸ ಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ರಿಂಚೆನ್ ಲಾಮೋ ಸೂಚಿಸಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಅಲ್ಪಸಂಖ್ಯಾತ ಸಮುದಾಯದ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರದ ಕೆಲವು ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಯೋಜನೆಗಳಿಂದ ಜನಸಾಮಾನ್ಯರು ವಂಚಿತರಾಗುತ್ತಿದ್ದಾರೆ. ಸರಕಾರ ಎಲ್ಲಾ ಜನಪಯೋಗಿ ಯೋಜನೆಗಳು ಜನರಿಗೆ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಅಧಿಕಾರಿಗಳು ಜನಸಾಮಾನ್ಯರ ನಡುವೆ ಹೋಗಿ ದಾಖಲೆ, ವಿಧಾನಗಳ ಬಗ್ಗೆ ತಿಳಿಸ ಬೇಕು. ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆಯಾಗದ ಹಾಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ರಿಂಚೆನ್ ಲಾಮೋ ಸಲಹೆ ನೀಡಿದರು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್‌ನಾಸಿರ್ ಲಕ್ಕಿಸ್ಟಾರ್ ಮಾತನಾಡಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮಕ್ಕಳಿಗೆ ಹಾಸ್ಟೆಲ್‌ಗಳ ಕೊರತೆ ಇದೆ. ಹೆಚ್ಚುವರಿ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರಕಾರದಿಂದ 1ರಿಂದ 8ನೇ ತರಗತಿಯ ಮಕ್ಕಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಲಾಗಿದೆ. ಅದನ್ನು ಮತ್ತೆ ಪ್ರಾರಂಭಿಸಬೇಕು. 10ರಿಂದ 12ನೇ ತರಗತಿಯ ಮಕ್ಕಳಿಗೆ ಸಿಗುವ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಯೋಗಕ್ಕೆ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಆಗ್ರಹಿಸಿದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಜಿನೇಂದ್ರ ಕೋಟ್ಯಾನ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಯಶೋಧರ ಜೆ., ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್, ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.