ಮರ್ಹೂಂ ಅಬ್ದುಲ್ ರಝಾಕ್ ರಿಗೆ ಸಂತಾಪ ಸೂಚಕ ಸಭೆ
ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಜಂಇಯ್ಯತುಲ್ ಫಲಾಹ್‌ನ ಮಾಜಿ ಮತ್ತು ಮಂಗಳೂರು ನಗರ ಘಟಕದ ಹಾಲಿ ಅಧ್ಯಕ್ಷರಾಗಿದ್ದ ಮರ್ಹೂಂ ಪಿ.ಬಿ. ಅಬ್ದುಲ್ ರಝಾಕ್ ಅವರಿಗೆ ಸಂತಾಪ ಸೂಚಕ ಸಭೆಯು ನಗರದ ಕಂಕನಾಡಿಯಲ್ಲಿರುವ ಫಲಾಹ್‌ನ ಸಭಾಂಗಣದಲ್ಲಿ ಮಂಗಳವಾರ ಜರುಗಿತು.
ನಗರದ ಬಂದರ್‌ನ ಕಚ್ಚಿಮೆಮನ್ ಮಸೀದಿಯ ಖತೀಬ್ ಮೌಲಾನಾ ಮೊಹಮ್ಮದ್ ಶುಹೈಬ್ ಹುಸೈನಿ ನದ್ವಿ ದುಆಗೈದರು.
ಜಂ ಇಯ್ಯತುಲ್ ಫಲಾಹ್‌ನ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಮಾತನಾಡಿ ಅಬ್ದುಲ್ ರಝಾಕ್ ತನ್ನ ಬದುಕನ್ನು ಜಂ ಇಯ್ಯತುಲ್ ಫಲಾಹ್‌ಗಾಗಿ, ಸಮುದಾಯಕ್ಕಾಗಿ, ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದರು. ಫಲಾಹ್ ಸಂಸ್ಥೆಯ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಈ ಸಭಾಂಗಣವು ಅವರ ಅಧ್ಯಕ್ಷತೆಯ ಕಾಲಾವಧಿಯಲ್ಲೇ ಆಗಿದ್ದು, ಅದಕ್ಕಾಗಿ ಪಟ್ಟ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ತನಗೆ ವಹಿಸುವ ಯಾವುದೇ ಜವಾಬ್ದಾರಿಯನ್ನು ಅವರು ಅತ್ಯಂತ ಚಾಕಚಕ್ಯತೆ ಯಿಂದ ನಿಭಾಯಿಸುತ್ತಿದ್ದರು ಎಂದರು.
ರಝಾಕ್ ಅವರು ಫಲಾಹ್ ಸಂಸ್ಥೆಯನ್ನು ಪೋಷಿಸಿದ್ದಾರೆ, ಬೆಳೆಸಿದ್ದಾರೆ. ಯುವಕರಿಗೆ ಸ್ಫೂರ್ತಿ ನೀಡಿದ್ದಾರೆ. ತನ್ನ ಗೆಳೆಯರ ಜೊತೆಗೂಡಿ ಸಮುದಾಯದ ಹಿತದ ಬಗ್ಗೆ ಅವರು ಸದಾ ಚಿಂತಿಸುತ್ತಿದ್ದರು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಹೇಳಿದರು.
ರಝಾಕ್ ಅವರು ಮಂಗಳೂರಿನಲ್ಲಿ ಮಹಿಳೆಯರ ಹಾಸ್ಟೆಲ್ ನಿರ್ಮಾಣದ ಕನಸು ಕಂಡಿದ್ದರು. ಆ ಕನಸನ್ನು ನಾವೆಲ್ಲಾ ಸೇರಿ ನನಸು ಮಾಡಬೇಕಿದೆ. ಅದೇ ನಾವು ಅವರಿಗೆ ಮಾಡುವ ಸಂತಾಪವಾಗಿದೆ ಎಂದು ಮಂಗಳೂರಿನ ಸಾಲಿ ಕೋಯ ತಂಙಳ್ ಅಭಿಪ್ರಾಯಪಟ್ಟರು.
ಸಹಾಯ ಯಾಚಿಸಿಕೊಂಡು ಬಂದ ಯಾರನ್ನೂ ಕೂಡ ರಝಾಕ್ ಅವರು ಬರಿಗೈಯಲ್ಲಿ ಕಳುಹಿಸಿದ್ದಿಲ್ಲ. ಅವರು ಇತರರ ನೆರವಿಗೆ ಸದಾ ಧಾವಿಸುವ ಗುಣ ಹೊಂದಿದ್ದರು ಎಂದು ಇಮ್ತಿಯಾಝ್ ಖತೀಬ್ ನುಡಿದರು.
ರಝಾಕ್ ಅವರು ಕಂಡ ಕನಸಿನಂತೆ ಮಹಿಳೆಯರ ಹಾಸ್ಟೆಲ್ ನಿರ್ಮಿಸಬೇಕು ಮತ್ತು ಆ ಕಟ್ಟಡಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಶಾಫಿ ಖಾಝಿ ಮನವಿ ಮಾಡಿದರು.
ಸಾನಿಧ್ಯ ವಿಶೇಷ ಮಕ್ಕಳ ಶಾಲೆಯ ಆಡಳಿತ ನಿರ್ದೇಶಕ ವಸಂತ ಕುಮಾರ್ ಶೆಟ್ಟಿ ಮಾತನಾಡಿ ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದ ರಝಾಕ್ ಅವರಿಗೆ ವಿಶೇಷ ಮಕ್ಕಳ ಮೇಲೆ ಪ್ರೀತಿ, ಕಾಳಜಿ ಇತ್ತು. ಸಾನಿಧ್ಯದ ಜೊತೆ ನಿಕಟ ಸಂಬಂಧ ಹೊಂದಿದ್ದ ಅವರು ನಮ್ಮ ಮುಂದೆ ಇಂದಿಲ್ಲದಿದ್ದರೂ ಕೂಡ ಅವರ ನೆನಪು ಸದಾ ನಮ್ಮಲ್ಲಿರಲಿದೆ ಎಂದರು.
ರಝಾಕ್ ಅವರ ಸಹೋದರ ಫರ್ವೇಝ್ ಅಲಿ ಮಾತನಾಡಿ ತನಗಾಗಿ ಏನನ್ನೂ ಮಾಡದ, ಸಮುದಾಯಕ್ಕಾಗಿ ಸದಾ ಸೇವೆ ಮಾಡುವ ತುಡಿತ ಹೊಂದಿದ್ದ ಅವರು ತನ್ನ ಒಡನಾಟದ ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ನೆರವು ಪಡೆದು ಅನೇಕರಿಗೆ ಸಹಾಯ ಮಾಡಿದ್ದನ್ನು ನೆನಪಿಸಿದರು.