ಶಾಸಕ ಭರತ್ ಶೆಟ್ಟಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2024-07-10 08:32 GMT

ಮಂಗಳೂರು,ಜು.10: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳನಗೈದು ಪ್ರಚೋದನಕಾರಿ ಭಾಷಣಗೈದ ಶಾಸಕ ಭರತ್ ಶೆಟ್ಟಿ ಮತ್ತು ಬಿಜೆಪಿಗರ ಕೀಳುಮಟ್ಟದ ರಾಜಕೀಯ ಖಂಡಿಸಿ ಮಂಗಳೂರು ನಗರ ಮತ್ತು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಇನ್ನೇನೋ ಮುಗಿಯುವ ಹಂತದಲ್ಲಿರುವಾಗಲೇ ಶಾಸಕರನ್ನು ಬಂಧಿಸಬೇಕು ಮತ್ತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆತಡೆ ನಡೆಸಲು ಮುಂದಾದರು. ತಕ್ಷಣ ಪೊಲೀಸರು ಕಾರ್ಯಕರ್ತರನ್ನು ತಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಸಿ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಶಾಸಕ ಭರತ್ ಶೆಟ್ಟಿ ಕೊಳಕು ಬಾಯಿಯ ವ್ಯಕ್ತಿ. ಅವರು ಶಾಸಕರಾಗಿ ಮುಂದುವರಿಯಲು ಅನರ್ಹರು. ತಕ್ಷಣ ಅವರು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ವೈದ್ಯಕೀಯ ವೃತ್ತಿಗೂ ಅವರು ಅಪಮಾನ ಎಸಗಿದ್ದಾರೆ. ಹಾಗಾಗಿ ಅವರು ಇನ್ಮುಂದೆ ವೈದ್ಯಕೀಯ ವೃತ್ತಿಯನ್ನೂ ಮಾಡಬಾರದು ಎಂದು ಒತ್ತಾಯಿಸಿದರು.

ಮಹಿಳಾ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಶಾಲೆಟ್ ಪಿಂಟೋ ಮಾತನಾಡಿ ಶಾಸಕ ಭರತ್ ಶೆಟ್ಟಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಮುಟ್ಟಿ ಮಾಡಲಿ. ಈ ಮಹಿಳಾ ಕಾರ್ಯಕರ್ತರೇ ಅವರಿಗೆ ಚಪ್ಪಲಿ ಹಾರ ಹಾಕಿ ಪಾಠ ಕಲಿಸುವೆವು ಎಂದು ಕಿಡಿ ಕಾರಿದರು.

ದಕ್ಷಿಣ ಮತ್ತು ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಂ ಮತ್ತು ಪ್ರಕಾಶ್ ಸಾಲ್ಯಾನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಾಜಿ ಮೇಯರ್‌ಗಳಾದ ಕೆ.ಅಶ್ರಫ್, ಶಶಿಧರ ಹೆಗ್ಡೆ, ಪಕ್ಷದ ಮುಖಂಡರಾದ ನವೀನ್ ಡಿಸೋಜ, ಎಸಿ ವಿನಯರಾಜ್, ಸುರೇಶ್ ಬಳ್ಳಾಲ್, ಸುನೀಲ್ ಬಜಿಲಕೇರಿ, ಲ್ಯಾನ್ಸಿಲಾಟ್ ಪಿಂಟೋ, ಮುಹಮ್ಮದ್ ಕುಂಜತ್ತಬೈಲ್ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News