ಪ್ರತಿಭೆಗಳು ಅನಾವರಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕ: ದಿನೇಶ್ ಗುಂಡೂರಾವ್
ಮಂಗಳೂರು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದ.ಕ. ಜಿಲ್ಲಾಡಳಿತದ ವತಿಯಿಂದ ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬಾಳುವ ಮನೋಭಾವ ಮುಖ್ಯ. ಮಕ್ಕಳಲ್ಲಿ ಚೈತನ್ಯಯುತ ಅಂಶದ ಪ್ರತಿಭೆಗಳು ಅನಾವರಣ ವಾಗಲು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕ ಎಂದರು.
ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಕ್ಕಳು ಯಾವುದೇ ಬೇಧ ಭಾವದ ಮನೋಭಾವ ಹೊಂದಿರಬಾರದು. ಈ ಮೂಲಕವೇ ಮಾನವ ತತ್ವ ಸಾಕಾರವಾಗಲು ಸಾಧ್ಯ. ಈ ಕುರಿತಾದ ಶಿಕ್ಷಣ ಇಂದಿನ ಅಗತ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆನಂದ್ ಕೆ., ಮನಪಾ ಸದಸ್ಯ ಎ.ಸಿ.ವಿನಯ್‌ರಾಜ್ ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಜರಗಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆಯಿತು.