ನಿವೇಶನ ಹಸ್ತಾಂತರ ಪ್ರಕ್ರಿಯೆ ವಿಳಂಬ ಖಂಡಿಸಿ ಪ್ರತಿಭಟನೆಗೆ ನಿರ್ಧಾರ
ಮಂಗಳೂರು, ಆ.18: ಮಂಗಳೂರು ಮಹಾನಗರ ಪಾಲಿಕೆಯ ಮಂಗಳಜ್ಯೋತಿಯಲ್ಲಿ ಆದಿವಾಸಿ ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ನಿವೇಶನ ಮಂಜೂರಾತಿಯ ಪ್ರಕ್ರಿಯೆಯು ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಕಳೆದ ನವೆಂಬರ್‌ನಲ್ಲಿ 13 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ನಿವೇಶನ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಲು ಒತ್ತಾಯಿಸಲಾಗಿತ್ತು. ಈ ಸಂದರ್ಭ ನಡೆದ ಜಂಟಿ ಸಭೆಯಲ್ಲಿ ಆರು ತಿಂಗಳ ಅವಧಿಯಲ್ಲಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ ನಿಗದಿತ ಕಾಲಾವಧಿ ಮುಗಿದರೂ ನಿವೇಶನ ಹಸ್ತಾಂತರ ಪ್ರಕ್ರಿಯೆ ನಡೆಸದಿರುವುದನ್ನು ಖಂಡಿಸಿ ಸೆ.25ರಂದು ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಲು ಗುರುವಾರ ವಾಮಂಜೂರು ಘಟಕದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಕರಿಯ ಕೆ ವಹಿಸಿದ್ದರು. ರಾಜ್ಯ ಸಹಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ, ಮುಖಂಡರಾದ ರಶ್ಮಿ, ರವೀಂದ್ರ, ಶೇಖರ್, ಸುರೇಂದ್ರ, ಜಯಚಿತ್ರ, ವಿಘ್ನೇಶ್ರ ಪಾಲ್ಗೊಂಡಿದ್ದರು.