ರಾಜ್ಯ ಸರಕಾರ ವಜಾಕ್ಕೆ ಆಗ್ರಹಿಸಿ ರಾಷ್ಟ್ರಪತಿ ಬಳಿಗೆ ನಿಯೋಗ: ಬಿ.ವೈ.ವಿಜಯೇಂದ್ರ

Update: 2024-10-15 07:12 GMT

ವಿಜಯೇಂದ್ರ (PC:x/@BYVijayendra)

ಬಂಟ್ವಾಳ, ಅ.15: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿ ಬಳಿಗೆ ಶೀಘ್ರದಲ್ಲೇ ನಿಯೋಗದ ತೆರಳಲಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬಂಟ್ವಾಳದ ಬಂಟರ ಭವನದಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಆಯೋಜಿಸಿರುವ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಬಿಜೆಪಿ ಕಾರ್ಯ ಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ವ್ಯಾಪಕವಾದ ಹಗರಣಗಳು, ಭ್ರಷ್ಟಾಚಾರಗಳು ನಡೆಯುತ್ತಿವೆ. ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ. ಮುಖ್ಯಮಂತ್ರಿಯೇ ಮುಡಾ ಹಗರಣದ ಆರೋಪ ಎದುರಿಸುತ್ತಿದ್ದಾರೆ. ಅದಲ್ಲದೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಸರಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವನ್ನು ವಜಾ ಮಾಡಲು ರಾಷ್ಟ್ರಪತಿಯವರನ್ನು ಒತ್ತಾಯಿಸಲಾಗುವುದು ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕಲ್ಲೆಸೆತ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವನ್ನು ಕೈ ಬಿಡಲು ರಾಜ್ಯ ಗೃಹ ಸಚಿವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಪ್ರಕಾರ ಸರಕಾರ ತೀರ್ಮಾನ ಮಾಡಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರಕಾರ ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿದೆ. ಇದರ ವಿರುದ್ಧ ಬಿಜೆಪಿ ಹುಬ್ಬಳ್ಳಿಯಲ್ಲಿ ಅ.25ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಅವರು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಕರ್ನಾಟಕ ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸಹ ಪ್ರಭಾರಿ ಸುಧಾಕರ ರೆಡ್ಡಿ, ಸಂಸದರಾದ ಕ್ಯಾ.ಬೃಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ಕುಮಾರ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಭಾರಿ ಉದಯ ಕುಮಾರ್, ಜಿಲ್ಲಾ ಚುನಾವಣಾ ಪ್ರಭಾರಿ ಕ್ಯಾ.ಗಣೇಶ್ ಕಾರ್ಣಿಕ್, ಜಿಲ್ಲಾ ವಕ್ತಾರ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News