ಇಲೆಕ್ಟ್ರಿಕ್ ರಿಕ್ಷಾಗಳಿಗೆ ಜಿಲ್ಲಾದ್ಯಂತ ಸಂಚಾರ ಆದೇಶ ಹಿಂಪಡೆಯಲು ಆಗ್ರಹ: ಮಂಗಳೂರಿನಲ್ಲಿ ರಿಕ್ಷಾ ಚಾಲಕರಿಂದ ಧರಣಿ

Update: 2024-08-16 09:25 GMT

ಮಂಗಳೂರು, ಆ.16: ಇಲೆಕ್ಟ್ರಿಕ್ ರಿಕ್ಷಾಗಳಲ್ಲಿ ದುಡಿಯುವವರೂ ನಮ್ಮವರೇ ಆಗಿದ್ದಾರೆ. ಆದರೆ ಸಾಮಾನ್ಯ ರಿಕ್ಷಾಗಳಿಗೆ ಭಿನ್ನವಾಗಿ ಜಿಲ್ಲಾಧಿಕಾರಿ ಇಲೆಕ್ಟ್ರಿಕ್ ರಿಕ್ಷಾಗಳು ದ.ಕ. ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿನ ನೀಡಿರುವುದು ಅವೈಜ್ಞಾನಿಕವಾಗಿದ್ದು, ಈ ಆದೇಶ ಹಿಂಪಡೆಯಬೇಕು ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಒತ್ತಾಯಿಸಿದ್ದಾರೆ.

ಮಂಗಳೂರಿನ ಕ್ಲಾಕ್ ಟವರ್ ಬಳಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ನಡೆದ ಆಟೋ ರಿಕ್ಷಾ ಚಾಲಕರ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಏಕಾಏಕಿಯಾಗಿ ಮಾಡಿರುವ ಜಿಲ್ಲಾಡಳಿತದ ತೀರ್ಮಾನವನ್ನು ರದ್ದುಪಡಿಸುವ ಜತೆಗೆ ರಿಕ್ಷಾ ಚಾಲಕರ ಹಿತ ಚಿಂತನೆಯನ್ನು ಕಾಪಾಡುವ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ ಸೂಕ್ತ ಕ್ರಮ ವಹಿಸಬೇಕು. ಮಂಗಳೂರು ನಗರ ವಲಯದಲ್ಲಿಯೇ ಈಗಾಗಲೇ 7000 ರಿಕ್ಷಾಗಳು ಪರವಾನಿಗೆ ಹೊಂದಿವೆ. ಇದರ ಜತೆಗೆ ಸುಮಾರು 2000ದಷ್ಟು ಇಲೆಕ್ಟ್ರಿಕ್ ರಿಕ್ಷಾಗಳಿವೆ. ಹಿಂದೆ ನಗರ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕವಿದ್ದ ರಿಕ್ಷಾ ನಿಲ್ದಾಣಗಳು 150ಕ್ಕೂ ಕಡಿಮೆಯಾಗಿವೆ. ಇನ್ನಷ್ಟು ರಿಕ್ಷಾಗಳು ಸೇರ್ಪಡೆಯಾಗುತ್ತಾ ಹೋದರೆ ಈಗಿರುವ ರಿಕ್ಷಾ ಚಾಲಕರು ತಮ್ಮ ಹೊಟ್ಟೆಪಾಡಿಗಾಗಿ ಏನು ಮಾಡುವುದು ಎಂದು ಅವರು ಪ್ರಶ್ನಿಸಿದರು.

 

ಜಿಲ್ಲಾಡಳಿತದ ಈ ರೀತಿಯ ಆದೇಶಗಳು ರಿಕ್ಷಾ ಚಾಲಕರ ನಡುವೆ ಘರ್ಷಣೆಗೆ ಎಡೆ ಮಾಡಿಕೊಡುತ್ತಿದೆ. ಕೇಂದ್ರ ಸರಕಾರ ಇ ರಿಕ್ಷಾಗಳಿಗೆ ನಿಯಮಾವಳಿ ಜಾರಿಗೊಳಿಸಬೇಕು. ಇದಕ್ಕಾಗಿ ತಮಿಳುನಾಡಿನಲ್ಲಿ ನಡೆದಂತೆ ಒಗ್ಗಟ್ಟಿನ ಹೋರಾಟ ಮುಂದುವರಿಸುತ್ತೇವೆ ಎಂದರು.

ಯೂನಿಯನ್ ಅಧ್ಯಕ್ಷ ಅಶೋಕ್ ಶೆಟ್ಟಿ ಮಾತನಾಡಿ, ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಗರದೊಳಗೆ ಆಟೋಗಳಿಗೆ ನಿಯಂತ್ರಣ ವಿಧಿಸಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಸಿ ಇ ಆಟೋಗಳಿಗೆ ಅನುಮತಿ ನೀಡಿರುವ ನಿರ್ಧಾರ ಸರಿಯಲ್ಲ. ಇದರಿಂದ ಬಡವರ ಬಾಳು ಬೀದಿಗೆ ಬರಲಿದೆ. ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ್ ಆಚಾರ್ ಮಾತನಾಡಿ, ಇಲೆಕ್ಟ್ರಿಕ್ ಆಟೋಗಳಿಗೆ ಜಿಲ್ಲಾದ್ಯಂತ ಸಂಚರಿಸಲು ಅವಕಾಶ ನೀಡುವ ಮೂಲಕ ಜಿಲ್ಲಾಡಳಿತ ತಪ್ಪು ನಿರ್ಧಾರ ಕೈಗೊಂಡಿದೆ. ಆಟೋ ಚಾಲಕರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸ್ಮಾರ್ಟ್ ಸಿಟಿ ವಿಫಲವಾಗಿದೆ. ನಮ್ಮ ಸಂವಿಧಾನಿಕ ಹಕ್ಕು ಪಡೆಯಲು ಹೋರಾಟ ಮುಂದುವರೆಸುತ್ತಿದ್ದು, ಜಿಲ್ಲಾಡಳಿತ ತನ್ನ ಆದೇಶ ಹಿಂಪಡೆಯಲಿ ಎಂದು ಆಗ್ರಹಿಸಿದರು.

ರಿಕ್ಷಾ ಚಾಲಕರ ಸಂಘಟನೆಯ ಮುಖಂಡ ಅರುಣ್ ಕುಮಾರ್ ಮಾತನಾಡಿ, ಯಾರದೋ ಲಾಬಿಗೆ ಮಣಿದು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ರಿಕ್ಷಾ ಚಾಲಕರ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದೆ ಚಾಲಕರು ರಿಕ್ಷಾ ಸಂಚಾರವನ್ನು ಬಂದ್ ಮಾಡಿ ತೀವ್ರ ರೀತಿಯ ಹೋರಾಟ ನಡೆಸಲಿದ್ದಾರೆ ಎಂದರು.

ಪ್ರಧಾನ ಕಾರ್ಯದರ್ಶಿ ಅನ್ಸರ್ ಫೈಸಲ್ ನಗರ್,ಲೋಕೇಶ್ ಶೆಟ್ಟಿ, ಪ್ರಮುಖರಾದ ಶೇಖರ್ ವಸಂತ್ ಶೆಟ್ಟಿ, ಬಾಲಚಂದ್ರ, ಸುರೇಶ್, ಸ್ಟ್ಯಾನಿ ನೊರೋನ್ಹಾ, ಸತೀಶ್ ನಾಯಕ್,ರಾಮಚಂದ್ರ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News