ರೋಗಿಗಳ ಆತ್ಮ ವಿಶ್ವಾಸ ವರ್ಧನೆಯಲ್ಲಿ ವೈದ್ಯರು ಮಹತ್ವದ ಪಾತ್ರ ವಹಿಸುತ್ತಾರೆ: ಸಂತೋಷ್ ಹೆಗ್ಡೆ

Update: 2024-08-19 11:51 GMT

ಕೊಣಾಜೆ: ‘ವೈದ್ಯಕೀಯ ವೃತ್ತಿಯಲ್ಲಿ ಅವಶ್ಯವಿರುವುದು ಜೀವನಪ್ರೀತಿ, ಸಹಾನುಭೂತಿ ಹಾಗೂ ಸೇವಾ ಮನೋಭಾವ. ಈ ಮೂರನ್ನೂ ಮೇಳವಿಸಿಕೊಂಡಿರುವ ವೈದ್ಯ ಸಮಾಜದ ಒಳಿತಿಗೆ ಸದಾ ಕಾಲ ಕೆಲಸ ಮಾಡಬಲ್ಲ. ರೋಗಿಗಳ ಆತ್ಮ ವಿಶ್ವಾಸ ವರ್ಧನೆಯಲ್ಲಿ ವೈದ್ಯ ಮಹತ್ವದ ಪಾತ್ರ ವಹಿಸುತ್ತಾನೆ ಎಂಬುದಕ್ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಅವರು ನಿದರ್ಶನ. ಅವರು ಸ್ವತಃ ಕ್ಯಾನ್ಸರ್ ಎಂಬ ಮಹಾಮಾರಿಯ ದಾಳಿಗೆ ತುತ್ತಾಗಿ ಬದುಕಿ ಬಂದಿದ್ದೇ ಒಂದು ವಿಸ್ಮಯ. ತಾವು ಕಂಡ ಏಳುಬೀಳುಗಳನ್ನು ದಾಖಲಿಸಲು ಸಾಹಿತಿಯಾಗಿ ಅವರು ಗ್ರಂಥಗಳನ್ನು ರಚಿಸಿರುವುದು ನಿಜಕ್ಕೂ ಶ್ಲಾಘನೀಯ. ಏಕೆಂದರೆ ಈ ಗ್ರಂಥಗಳು ಇಡೀ ವೈದ್ಯ ಸಮುದಾಯಕ್ಕೆ ಮಾರ್ಗದರ್ಶಿಗಳಂತಿವೆ ಎಂದು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನುಡಿದರು.

ಅವರು ಪ್ರಸಿದ್ಧ ಎಲುಬುರೋಗತಜ್ಞ, ಸಾಹಿತಿ ಹಾಗೂ ಸಮಾಜ ಸೇವಕ ಡಾ. ಎಂ. ಶಾಂತಾರಾಮ ಶೆಟ್ಟಿ ಅವರು ರಚಿಸಿದ ಇಂಗ್ಲಿಷ್ ಪುಸ್ತಕವನ್ನು ಬೆಂಗಳೂರಿನ ಎಂಬೆಸಿ ಬೌಲೆವರ್ಡ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿರು.

ರೋಗಿಗಳ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಅವರಲ್ಲಿ ದೃಢವಾದ ಆತ್ಮವಿಶ್ವಾಸ ತುಂಬಲು ಅಹರ್ನಿಶಿ ಶ್ರಮಿಸುತ್ತಿದ್ದ ಪ್ರಸಿದ್ಧ ಎಲುಬು ರೋಗತಜ್ಞ ಡಾ. ಶಾಂತಾರಾಮ ಶೆಟ್ಟರು ಸ್ವತಃಕ್ಯಾನ್ಸರ್‍ರೋಗದಿಂದ ಬಳಲಿ ಶಸ್ತ್ರಚಿಕಿತ್ಸೆ, ಕೀಮೊ ಥೆರಪಿ ಇತ್ಯಾದಿಗಳಿಗೆ ಈಡಾಗಿ ಯಶಸ್ವಿಯಾಗಿ ಗುಣಮುಖರಾದದ್ದು– ಅವರೊಳಗೆ ನೆಲೆಯೂರಿದ್ದ ನೈತಿಕತೆ, ಪ್ರಾಮಾಣಿಕತೆ, ಸೇವಾತತ್ಪರತೆ ಹಾಗೂ ಭಾರತೀಯ ನೆಲದತತ್ವ ಸಿದ್ಧಾಂತಗಳು ಬೀರಿದ್ದ ಅಪಾರ ಪ್ರಭಾವಗಳಿಂದ ಎಂದರು.

‘ಕೇವಲ ವೈದ್ಯಜಗತ್ತಿಗಷ್ಟೇ ತಮ್ಮ ಜ್ಞಾನ ಪಸರಿಸಿದರೆ ಸಾಲದು, ತಮ್ಮ ಜೀವನಾನುಭವ ಹಾಗೂ ತಜ್ಞ ಅನುಭವ ಜನಸಾಮಾನ್ಯರಿಗೂ ತಿಳಿಯಬೇಕು ಎಂದು ಶಾಂತಾರಾಮ ಶೆಟ್ಟರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿರು ವುದು ಅವರಜನಪರ ಕಾಳಜಿಗೆ ದ್ಯೊತಕ’ ಎಂದರು.

ಇದೇ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಹೆಚ್. ಸುದರ್ಶನ್ ಬಲ್ಲಾಳ್ ಹಾಗೂ ಮಲ್ಲಿಗೆ ಆಸ್ಪತ್ರೆಯ ಅಧ್ಯಕ್ಷ ಡಾ. ಎ.ಸಿ. ಶ್ರೀರಾಂ ಅವರು ಎಂ. ಶಾಂತಾರಾಮ ಶೆಟ್ಟರ ಲೇಖನಿಯಿಂದ ಮೂಡಿಬಂದಿರುವ ‘ಎಲುಬು ರೋಗಿಗಳು ಹಾಗೂ ಯೋಗ’, ‘ವೈದ್ಯವೃತ್ತಿಯ ನೀತಿ ಮತ್ತು ತತ್ವ’ ಹಾಗೂ ‘ಮೊಳಹಳ್ಳಿ-ಮೈ ಗೋಲ್ಡನ್ ವಿಲೇಜ್– ಮೈ ಎನ್ಸೆಸ್ಟ್ರಲ್ ಹೋಂ-ಪಟೇಲ್ಸ್‍ದೊಡ್ಡಮನೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಹಿರಿಯ ವೈದ್ಯರು, ಶಿಕ್ಷಣ ತಜ್ಞರು ಹಾಗೂ ಸಾಹಿತ್ಯಾಸಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News