ಸರಕಾರಿ ಶಾಲೆಗಳನ್ನು ಉಳಿಸಲು ‘ದತ್ತು ಯೋಜನೆ’ಗೆ ಒತ್ತು: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು, ದಾನಿಗಳು, ಕಂಪನಿ ಗಳ ಸಿಎಸ್‌ಆರ್ ನಿಧಿಯಿಂದ ‘ಕ್ರೌಡ್ ಸೋರ್ಸಿಂಗ್’ ಮೂಲಕ ಸಾರ್ವಜನಿಕ ಸಹಭಾಗಿತ್ವದಡಿ ದತ್ತು ಯೋಜನೆಗೆ ಒತ್ತು ನೀಡುವ ಕಾರ್ಯಕ್ರಮ ರೂಪಿಸಲು ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ದ.ಕ. ಜಿಲ್ಲಾ ತೈಮಾಸಿಕ ಕೆಡಿಪಿ ಮುಂದುವರಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಬಂಟ್ವಾಳದ ದಡ್ಡಲಕಾಡು ಹಾಗೂ ಬೆಳ್ತಂಗಡಿಯ ಶಿರ್ಲಾಲುವಿನಲ್ಲಿ ಸರಕಾರಿ ಶಾಲೆಗಳನ್ನು ಹಳೆ ವಿದ್ಯಾರ್ಥಿ ಗಳು, ಸ್ಥಳೀಯರು ಹಾಗೂ ದಾನಿಗಳು ದತ್ತು ಪಡೆದು ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿದೆ. ಅದೇ ರೀತಿ ಉಳಿದ ಶಾಲೆಗಳನ್ನೂ ಶಾಸಕರ ಅನುದಾನವನ್ನೂ ಬಳಸಿಕೊಂಡು ಅಭಿವೃದ್ಧಿ ಪಡಿಸಬೇಕು ಎಂದು ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇ ಗೌಡ ಅವರು ಸಲಹೆ ನೀಡಿದರು.
ಬಂಟ್ವಾಳದ ದಡ್ಡಲಕಾಡಿನಲ್ಲಿ 28 ಮಕ್ಕಳಿದ್ದ ಸರಕಾರಿ ಶಾಲೆಯಲ್ಲಿ ಇದೀಗ 1028 ಮಕ್ಕಳು ಕಲಿಯುತ್ತಿದ್ದಾರೆ. ಆ ನಿಟ್ಟಿ ನಲ್ಲಿ ಮಾದರಿಯಾಗಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಜಿಲ್ಲಾಡಳಿತದಿಂದ ಈ ರೀತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರೌಡ್ ಸೋರ್ಸಿಂಗ್ ಪೋರ್ಟಲ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಭೆಯಲ್ಲಿ ತಿಳಿಸಿದರು.
ಊರಿನವರು, ಹಳೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಯಾವ ರೀತಿಯಲ್ಲಿ ಹಣಕಾಸನ್ನು ಒಗ್ಗೂಡಿಸುವುದು, ಯಾವ ರೀತಿ ಯಲ್ಲಿ ಅಭಿವೃದ್ಧಿ ಪಡಿಸುವ ಕುರಿತಂತೆ ನಿರ್ಧಾರ ಕೈಗೊಂಡು ಜಿಲ್ಲೆಗೆ ಸೂಕ್ತ ಬ್ರಾಂಡ್ ಅಂಬಾಸಿಡರ್ ಆಯ್ಕೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಕ್ರಮ ವಹಿಸುವಂತೆ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ದ.ಕ. ಜಿಲ್ಲೆಯಲ್ಲಿ ಒಟ್ಟು 430 ಆರೋಗ್ಯ ಉಪಕೇಂದ್ರಗಳಿದ್ದು, 186 ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲವಾಗಿವೆ. 73 ಕಟ್ಟಡಗಳಿಗೆ ಈಗಾಗಲೇ ನಿವೇಶನ ದೊರಕಿದ್ದು, ಉಳಿದ 113 ಉಪ ಕೇಂದ್ರಗಳಿಗೆ ಜಾಗದ ಹುಡುಕಾಟ ನಡೆಯುತ್ತಿದೆ ಎಂದು ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾಹಿತಿ ನೀಡಿದರು.
ಆರೋಗ್ಯ ಹಾಗೂ ಶಿಕ್ಷಣ ಅತೀ ಮುಖ್ಯವಾದ ಅಂಗವಾಗಿದ್ದು, ಇವುಗಳಿಗೆ ನಿವೇಶನ, ಕಟ್ಟಡದ ಕೊರತೆ ಆಗಬಾರದು. ಯಾಕಾಗಿ ನಿವೇಶನ ದೊರೆತಿಲ್ಲ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬೋಜೇಗೌಡರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮೂರು ತಿಂಗಳೊಳಗೆ ಲಭ್ಯ ಇರುವಲ್ಲಿ ನಿವೇಶನ ಒದಗಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ವೆನ್‌ಲಾಕ್ ಆಸ್ಪತ್ರೆಯಲ್ಲಿ 186 ಡಿಗ್ರೂಪ್ ನೌಕರರಿಗೆ ಕಳೆದ ಎರಡು ತಿಂಗಳಿನಿಂದ ವೇತನವಾಗಿಲ್ಲ ಎಂದು ಜಿ.ಪಂ. ನಾಮ ನಿರ್ದೇಶಿತ ಸದಸ್ಯ ಸಂತೋಷ್ ಕುಮಾರ್ ಸಭೆಯ ಗಮನ ಸೆಳೆದರು. ಜೂನ್‌ವರೆಗೆ ವೇತನ ಪಾವತಿಯಾಗಿದೆ. ಗುತ್ತಿಗೆ ವಹಿಸಿಕೊಂಡಿರುವವರ ಅವಧಿ ಮುಗಿದಿದ್ದು, ಹೊಸ ಗುತ್ತಿಗೆದಾರರು ಮುಂದೆ ಬಂದಿಲ್ಲ ಎಂದು ವೆನ್‌ಲಾಕ್ ಅಧೀಕ್ಷಕರು ಸಭೆಗೆ ಮಾಹಿತಿ ನೀಡಿದರು.
ಗುತ್ತಿಗೆದಾರರಿಗೆ ಮೂರು ತಿಂಗಳು ಅವಧಿ ವಿಸ್ತರಿಸಲು ಸೂಚನೆ ನೀಡಲಾಗಿದೆ. ಅವರು ಆ ರೀತಿ ಬಿಟ್ಟು ಹೋಗಲು ಆಗದು. ಹೋದಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ರೀತಿ ಗುತ್ತಿಗೆದಾರ ಸಂಸ್ಥೆಗಳಿಂದ ನೌಕರರಿಗೆ ವೇತನ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ನೇರ ಪಾವತಿಗೆ ಕ್ರಮ ವಹಿಸಲು ರಾಜ್ಯ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ವೆನ್‌ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್‌ಗಳ ಕೊರತೆ ಇದೆ ಎಂದು ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸಚಿವರ ಗಮನ ಸೆಳೆದರು.
ಶಿಶು ಮರಣ ದರದಲ್ಲಿ ಜಿಲ್ಲೆಯಲ್ಲಿ ಶೇ. 10.03ಕ್ಕೆ ಇಳಿಕೆಯಾಗಿದ್ದು, ರಾಜ್ಯಕ್ಕೆ ಹೋಲಿಸಿದರೆ ಕಡಿಮೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದಾಗ, ಆಕ್ರೋಶಗೊಂಡ ವಿಧಾನ ಪರಿಷತ್ ಸದಸ್ಯ ಬೋಜೇಗೋಡರು, ಅಧಿಕಾರಿಗಳು ಈ ರೀತಿ ಉತ್ತರ ನೀಡುವುದು ಸರಿಯಲ್ಲ. ಈಗ ಆಗುತ್ತಿರುವ ಶಿಶುಮರಣಕ್ಕೆ ಕಾರಣವೇನೆಂದು ತಿಳಿದು ಮುಂದೆ ಆಗದಂತೆ ಕ್ರಮ ವಹಿಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಅಧ್ಯಕ್ಷ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ರಾದ ಐವನ್ ಡಿಸೋಜಾ, ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಎಸ್ಪಿ ಯತೀಶ್, ಮೆಸ್ಕಾಂ ಎಂಡಿ ಪದ್ಮಾವತಿ, ಡಿಎಫ್‌ಒ ಆ್ಯಂಟನಿ ಮರಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಸೂಚಿಯಲ್ಲಿ ಆಂಗ್ಲಭಾಷೆಗೆ ತರಾಟೆ
ಕೆಡಿಪಿ ಸಭೆಯ ಕಾರ್ಯಸೂಚಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಗೆ ಸಂಬಂಧಿಸಿದ ಮಾಹಿತಿಗಳನ್ನು ಆಂಗ್ಲ ಭಾಷೆಯಲ್ಲಿ ನಮೂದಿಸಿದ್ದ ಕುರಿತಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಆಡಳಿತ ಭಾಷೆ ಕನ್ನಡವನ್ನೇ ಈ ರೀತಿ ಕಡಗಣನೆ ಮಾಡುತ್ತಿರುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆಗೈದರು.
ಕೆಲವೊಂದು ಮಾಹಿತಿಗಳು ತಪ್ಪಾಗಿ ಆಂಗ್ಲ ಭಾಷೆಯಲ್ಲಿ ಮುದ್ರಣವಾಗಿವೆ. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸು ವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.