ತಿಂಗಳು ಕಳೆದರೂ ಆಸ್ಪತ್ರೆ, ವೈದ್ಯರ ವಿರುದ್ಧ ಕ್ರಮ ಆಗಿಲ್ಲ : ಮೃತ ಫರ್ಹಾನ್ ಕುಟುಂಬದ ಆರೋಪ

Update: 2023-12-24 14:48 GMT

ಫೈಲ್‌ ಫೋಟೊ 

ಸುರತ್ಕಲ್ : ಇಲ್ಲಿನ ಅಥರ್ವಾ ಆರ್ಥೋ ಕೇರ್ ಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಬಾಲಕ ಮೊಯ್ದೀನ್ ಫರ್ಹಾನ್ ಮೃತಪಟ್ಟ ಪ್ರಕರಣಕ್ಕೆ ತಿಂಗಳಾದರೂ ಇನ್ನೂ ತಪ್ಪಿತಸ್ಥ ಆಸ್ಪತ್ರೆ ಮತ್ತು ವೈದ್ಯರ ಮೇಲೆ ಕ್ರಮಗಳಾಗಿಲ್ಲ ಎಂದು ಮೃತ ಬಾಲಕನ ಕುಟುಂಬ ಆರೋಪಿಸಿದೆ‌.

ನ.22ರಂದು ಕಾಲಿನ ಪಾದಕ್ಕೆ ಆಗಿದ್ದ ಸಣ್ಣ ಗಾಯಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಫರ್ಹಾನ್ ಗೆ ಶಸ್ತ್ರ ಚಿಕಿತ್ಸೆ ಮಾಡಲೆಂದು ಅನಸ್ತೇಶಿಯಾ ನೀಡಿದ್ದು, ಮತ್ತು ಬರುವ ಔಷಧಿ ಅಳತೆ ಮೀರಿ ಬಾಲಕನಿಗೆ ನೀಡಿದ್ದ ಪರಿಣಾಮ ಬಾಲಕ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಕೆಪಿಸಿಸಿ ಪ್ರಧಾನ ಕಾರಗಯದರ್ಶಿ ಇನಾಯತ್ ಅಲಿ ಮತ್ತು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಲಾಗಿತ್ತು. ಅದರಂತೆ ಉಸ್ತುವಾರಿ ಸಚಿವರು ಕಾಲಮಿತಿಯೊಳಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಯ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು.

ಅದರಂತೆ 15ದಿನಗಳ ಕಾಲಮಿತಿಯಲ್ಲಿ ವರದಿ‌ ನೀಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದರು. ಆದರೆ, ಘಟನೆ ನಡೆದು ತಿಂಗಳು ಕಳೆದರೂ ಇನ್ನೂ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ತಜ್ಞ ವೈದ್ಯರ ತನಿಖಾ ಸಮಿತಿಯ ಕೈಸೇರಿಲ್ಲ ಎಂದು ತಿಳಿದು ಬಂದಿದೆ.

ಈಗಾಗಲೇ ಹಲವರು ಆಸ್ಪತ್ರೆಯ ಪರವಾಗಿ ವಕಾಲತ್ತು ವಹಿಸಿಕೊಂಡು ಸಂಬಂಧಿಕರೊಂದಿಗೆ ಮಾತುಕತೆಗೆ ಶ್ರಮಿಸಿ ದ್ದಾರೆ. ಈ ಪೈಕಿ ಬಾಲಕನಿಗೆ ನ್ಯಾಯ ಒದಗಿಸಬೇಕೆಂದು ಮುಂಚೂಣಿಯಲ್ಲಿದ್ದ ನಾಯಕರನ್ನೂ ಸಂಪರ್ಕಿಸಿ ರಾಜಿ ಸಂಧಾನಕ್ಕಾಗಿ ಮೃತ ಬಾಲಕನ ಕುಟುಂಬವನ್ನು ಒಪ್ಪಿಸುವಂತೆ ದುಂಬಾಲು ಬಿದ್ದಿದ್ದಾರೆ ಎಂದು ಕುಟುಂಬದ ಮೂಲ ಮಾಹಿತಿ ನೀಡಿದೆ.

"ಮರಣೋತ್ತರ ಪರೀಕ್ಷೆಯ ವರದಿಯನ್ನು ಮೈಸೂರಿನ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ‌. ಅಲ್ಲಿಂದ ಅಂತಿಮ ವರದಿ ಬಂದಿಲ್ಲ. ಪೊಲೀಸ್ ಇಲಾಖೆಯೊಂದಿಗೆ ವರದಿ ಬಾರದಿರುವ ಕುರಿತು ಚರ್ಚಿಸಲಾಗಿದೆ".

- ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

"ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಬಾಲಕನ ಕುಟುಂಬಸ್ಥರು ಹತಾಶರಾಗುವುದು ಬೇಡ. ಯಾವುದೇ ಕಾರಣಕ್ಕೂ ನ್ಯಾಯ ನಿರಾಕರಣೆಗೆ ಅವಕಾಶ ನೀಡುವುದಿಲ್ಲ. ನಾನು ಪೊಲೀಸ್ ಇಲಾಖೆ ಮತ್ತು ತಜ್ಞ ವೈದ್ಯರ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈ ವಿಚಾರವಾಗಿ ಚರ್ಚಿಸುತ್ತಿದ್ದೇನೆ. ಪೊಲೀಸ್ ಇಲಾಖೆ ಮತ್ತು ವೈದ್ಯರ ತಂಡ ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದೆ. ಶೇ. 100 ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಅಲ್ಲಿಯವರೆಗೂ ಸಂತ್ರಸ್ತ ಕುಟುಂಬದ ಜೊತೆ ನಿಲ್ಲುತ್ತೇನೆ.

- ಇನಾಯತ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ಜಿಲ್ಲಾಡಳಿತ, ಸಚಿವರ ಮೇಲೆ ನಂಬಿಕೆ ಇಟ್ಟು ಘಟನೆ ನಡೆದ ದಿನದಂದು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ನಡೆದು ಕೊಂಡಿದ್ದೇವೆ. 15 ದಿನಗಳಿಂದ ಒಂದು ತಿಂಗಳ ಒಳಗಾಗಿ ನ್ಯಾಯ ಇತ್ಯರ್ಥವಾಗಬೇಕಿತ್ತು. ಆದರೆ, ತಿಂಗಳು ಕಳೆದರೂ ಇನ್ನೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಲಭಿಸಿಲ್ಲ. ಆಸ್ಪತ್ರೆಯ ಲಾಭಿಗಳ ಹಿತ ಕಾಯುವ ಹುನ್ನಾರದ ಭಾಗವಾಗಿ ವಿಳಂಬ ಮಾಡಲಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಬಾಲಕನ ಕುಟುಂಬಸ್ಥರು ನಿರಂತರ ಸಂಪರ್ಕದಲ್ಲಿದ್ದು ಸೋಮವಾರ ಕುಟುಂಬದವರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News