ರೈಲ್ವೆ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಆಹಾರ: ರೈಲ್ವೆ ಮಂಡಳಿ ಸೂಚನೆ

Update: 2023-07-20 13:42 GMT

File Photo 

ಮಂಗಳೂರು, ಜು.20: ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ ತಿನಿಸುಗಳ ಜೊತೆಗೆ ಕುಡಿಯುವ ನೀರಿನ ಪ್ಯಾಕೇಜು ಒಳಗೊಂಡಿರುವ ಸೇವೆಯನ್ನು ಸಾಮಾನ್ಯ ಬೋಗಿಗಳು ನಿಲ್ಲುವ ಪ್ಲಾಟ್‌ಫಾರ್ಮ್ ಬಳಿಯಲ್ಲಿ ನೀಡುವ ಯೋಜನೆಯನ್ನು ಒದಗಿಸುವಂತೆ ರೈಲ್ವೆ ಮಂಡಳಿ ಸೂಚಿಸಿದೆ.

ಐಆರ್‌ಸಿಟಿಸಿಯ ಅಡುಗೆ ಘಟಕಗಳಿಂದ ತಯಾರಿಸಿದ ಕೌಂಟರ್‌ಗಳಲ್ಲಿ ಪ್ರಯಾಣಿಕರಿಗೆ ಊಟದ ಪೊಟ್ಟಣ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಈ ಕೌಂಟರ್‌ಗಳು ಪ್ಲಾಟ್‌ಫಾರ್ಮ್‌ಗಳಲ್ಲಿನ ಸಾಮಾನ್ಯ ಬೋಗಿಗಳು ನಿಲ್ಲುವ ಸ್ಥಳದಲ್ಲಿಯೇ ಜೋಡಿಸಲು ನಿರ್ಧರಿಸಲಾಗಿದೆ. ಈ ಸೇವಾ ಕೌಂಟರ್‌ ಗಳನ್ನು 6 ತಿಂಗಳ ಅವಧಿಯ ಪ್ರಾಯೋಗಿಕ ಆಧಾರದ ಮೇಲೆ ಒದಗಿಸಲಾಗುತ್ತದೆ.

ಈ ಯೋಜನೆಯು ನೈರುತ್ಯ ರೈಲ್ವೆ ವಲಯದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳಲ್ಲಿ ಆರಂಭಿಸಲಾಗುತ್ತಿದೆ.

ನಿಲ್ದಾಣದ ಸೇವಾ ಕೌಂಟರ್‌ಗಳಲ್ಲಿ ಎರಡು ವಿಧದ ಊಟದ ಪ್ಯಾಕೇಜ್‌ಗಳಿರುತ್ತದೆ.

1ನೇ ಪ್ಯಾಕೇಜ್‌ನಲ್ಲಿ - ಎಕಾನಮಿ ಮೀಲ್ - 07 ಪೂರಿ (175 ಗ್ರಾಂ), ಒಣ ಆಲೂ ವೆಜ್ (150 ಗ್ರಾಂ) ಮತ್ತು ಉಪ್ಪಿನಕಾಯಿ (12 ಗ್ರಾಂ) ಒಳಗೊಂಡಿರುತ್ತದೆ. ಇದಕ್ಕೆ 20 ರೂ. (ಜಿಎಸ್‌ಟಿ ಸೇರಿ) ದರ ನಿಗದಿ ಮಾಡಲಾಗಿದೆ.

2ನೇ ಪ್ಯಾಕೇಜ್‌ನಲ್ಲಿ - ತಿಂಡಿ ಊಟ (350 ಗ್ರಾಂ) - ಅನ್ನ, ರಾಜ್ಮಾ/ಚೋಲೆ ಅನ್ನ/ಖಿಚಡಿ/ಕುಲ್ಚಾ/ ಭತುರಾ/ಪಾವ್-ಬಾಜಿ/ಮಸಾಲಾ ದೋಸೆ ಸೇರಿದಂತೆ ಕೆಲ ದಕ್ಷಿಣ ಭಾರತದ ಆಹಾರದ ಪೊಟ್ಟಣ ಒಳಗೊಂಡಿರುತ್ತದೆ ಇದಕ್ಕೆ ರೂ. 50 (ಜಿಎಸ್‌ಟಿ ಸೇರಿ) ದರ ನಿಗದಿ ಮಾಡಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ 200 ಎಂಎಲ್ ಗ್ಲಾಸ್ ಮತ್ತು 1 ಲೀಟರ್ ಕುಡಿಯುವ ನೀರಿನ ಬಾಟಲಿಗಳು ಲಭ್ಯವಿರುತ್ತವೆ. ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ಹೆಚ್ಚಿನ ನಿಲ್ದಾಣಗಳನ್ನು ಗುರುತಿಸಿ ವಿಸ್ತರಿಸಲಾಗುವುದು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News