ಮಂಗಳೂರು ಮನಪಾದ ಶೇ.50 ಜನರಿಗೆ ಸಂಸ್ಕರಿಸದ ನೀರು ಪೂರೈಕೆ | ಸತ್ಯಶೋಧನಾ ಸಮಿತಿ ರಚಿಸಿ ಸಿಎಂಗೆ ವರದಿ ಸಲ್ಲಿಕೆ: ಐವನ್ ಡಿಸೋಜ

Update: 2025-01-06 09:49 GMT

ಮಂಗಳೂರು, ಜ.6: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಸದಸ್ಯರು ನಗರದಲ್ಲಿ ಶೇ.50ರಷ್ಟು ಜನರಿಗೆ ಸಂಸ್ಕರಿಸದ ನೀರು ಪೂರೈಕೆಯಾಗುತ್ತಿರುವ ಕುರಿತಂತೆ ಮಾಡಿರುವ ಆರೋಪ ಗಂಭೀರ ವಿಚಾರವಾಗಿದೆ. ಈ ಬಗ್ಗೆ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಹಾಗೂ ತಜ್ಞರನ್ನು ಒಳಗೊಂಡು ಸತ್ಯಶೋಧನಾ ಸಮಿತಿ ರಚಿಸಿ ವರದಿಯನ್ನು ಮುಖ್ಯಮಂತ್ರಿಗೆ ಒಪ್ಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಮನಪಾ ಕಚೇರಿಯಲ್ಲಿನ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 13 ನದಿಗಳು ಕಲುಷಿತಗೊಂಡಿರುವ ವರದಿಯಲ್ಲಿ ನೇತ್ರಾವತಿ ನದಿಯೂ ಸೇರಿದ್ದು, ನಗರ ಪಾಲಿಕೆಯ 60 ವಾರ್ಡ್ ಗಳಿಗೆ ನೀರು ಪೂರೈಕೆ ಪ್ರಮುಖ ಜೀವನದಿ ಇದಾಗಿರುವುದರಿಂದ ಈ ವಿಚಾರ ಗಂಭೀರವಾಗಿದೆ ಎಂದರು.

ನಗರ ಬೆಂದೂರ್ವೆಲ್ ನಿಂದ ಎಂಸಿಫ್ ಗೆ ಹಾದುಹೋಗುವ ಲೈನ್ ನಲ್ಲಿ ಪೂರೈಕೆಯಾಗುವ ನೀರು ಸಂಸ್ಕರಣೆಯಾಗದೆ ಅಲ್ಲಿನ ವಾರ್ಡ್ ಗಳ ಜನರಿಗೆ ಪೂರೈಕೆಯಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ತಕ್ಷಣ ಕ್ರಮ ವಹಿಸಿ ಪ್ರಯೋಗಾಲಯದ ಮೂಲಕ ವರದಿ ತಯಾರಿಸಿ ಸರಕಾರಕ್ಕೆ ನೀಡಬೇಕು ಎಂದವರು ಒತ್ತಾಯಿಸಿದರು.

ನಗರದಲ್ಲಿ ಎಸ್ ಟಿಪಿಗಳ (ಒಳಚರಂಡಿ ನೀರು ಸಂಕ್ಷರಣಾ ಘಟಕ) ನಿರ್ವಹಣೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ವರ್ಷಕ್ಕೆ 1.50 ಕೋಟಿ ರೂ. ನಿರ್ವಹಣೆಗಾಗಿ ಗುತ್ತಿಗೆದಾರರಿಗೆ ಪಾವತಿಯಾಗುತ್ತಿದ್ದರೂ ಕೊಳಚೆ ನೀರು ನದಿ, ಕೆರೆ, ಬಾವಿಗಳಿಗೆ ಹೋಗುತ್ತಿರುವ ದೂರು ಬರುತ್ತಿದೆ. ಕಳೆದ ವಾರ ನಾನು ಜಪ್ಪಿನಮೊಗರು ಕಡೆಗೆ ಭೇಟಿ ನೀಡಿದ್ದ ವೇಳೆ ಕೊಳಚೆ ನೀರು ರಾಜಕಾಲುವೆಗಳಲ್ಲಿ ಹರಿಯುವುದು ಕಂಡು ಬಂದಿದೆ. ಈ ವಿಚಾರಗಳ ಬಗ್ಗೆ ಸರಕಾರದ ಗಮನ ಸೆಳೆಯಬೇಕಾದ ಮನಪಾ ಆಡಳಿತ ಅದನ್ನು ಮಾಡದೆ ಲೋಪವೆಸಗಿದೆ. ನಾವು ಶುದ್ಧ ಕುಡಿಯುವ ನೀರು ನೀಡುತ್ತಿರುವುದಾಗಿ ಹೇಳಿರುವ ಮೇಯರ್ ಹಾಗೂ ಆಡಳಿತ ಪಕ್ಷದ ಹಿರಿಯ ಸದಸ್ಯರು, ಕಾಂಗ್ರೆಸ್ ಅವಧಿಯಲ್ಲೂ ಹೀಗೇ ನೀರನ್ನು ಪೂರೈಸಲಾಗುತ್ತಿತ್ತು ಎಂಬ ಉಡಾಫೆಯ ಉತ್ತರ ನೀಡಿದ್ದಾರೆ. ಕಳೆದ ಐದು ವರ್ಷಗಳಿಂದ ಇವರೇನು ಕತ್ತೆ ಕಾಯುತ್ತಿರುವುದೇ ಎಂದು ಐವನ್ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಸದಸ್ಯರು ಪ್ರಸ್ತಾಪಿಸಿದಾಗ ನನಗೆ ಅದು ಶಾಕ್ ಆಗಿತ್ತು. ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಸಚಿವರ ಗಮನವನ್ನೂ ಸೆಳೆಯಲಾಗಿದೆ. ಶೀಘ್ರವೇ ನನ್ನ ನೇತೃತ್ವದಲ್ಲಿ ಸಮಿತಿಯು ಪರಿಶೀಲನೆ ನಡೆಸಿ ಯಾವೆಲ್ಲಾ ವಾರ್ಡ್ ಗಳಲ್ಲಿ ಸಂಸ್ಕರಿಸದೆ ನೀರು ಪೂರೈಕೆಯಾಗುತ್ತಿದೆ, ಅದಕ್ಕೆ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬ ನಿಟ್ಟಿನಲ್ಲಿ ವರದಿ ತಯಾರಿಸಿ ಜ.17ರಂದು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.

ದಾರಿದೀಪ, ರಸ್ತೆಯ ಜತೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಬಹು ಮುಖ್ಯವಾಗಿದ್ದು, ಜನರ ಆರೋಗ್ಯದಲ್ಲಿ ಏನಾದರೂ ಮುಂದೆ ತೊಂದರೆ ಆದಲ್ಲಿ ಅದಕ್ಕೆ ಮನಪಾದ ಬಿಜೆಪಿ ಆಡಳಿತ ನೇರ ಹೊಣೆಯಾಗಲಿದೆ. ಎಸ್ ಟಿಪಿಗಳ ನಿರ್ವಹಣೆ ಕುರಿತಂತೆ ಪಂಪ್ ಹಾಳಾಗಿದೆ, ದುಡ್ಡು ಇಲ್ಲ, ಟೆಂಡರ್ ಆಗಿಲ್ಲ ಎಂಬ ಉತ್ತರ ನೀಡುವ ಬಿಜೆಪಿ ಜನಪ್ರತಿನಿಧಿಗಳು ಆಡಳಿತ ನಡೆಸಲು ಅನರ್ಹರು. ಈ ವಿಚಾರಗಳನ್ನು ಜನರ ಮುಂದಿಡಲಾಗುವುದು ಎಂದು ಹೇಳಿದ ಅವರು, ಈ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜೀ ಮಾಡಲು ಸಾಧ್ಯವಿಲ್ಲ ಎಂದರು.

ನಗರಭಿವೃದ್ಧಿ ಸಚಿವರು ತಕ್ಷಣ ನಗರಕ್ಕೆ ಭೇಟಿ ನೀಡಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯಬೇಕು. ಕೋಟಿಗಟ್ಟಲೆ ಸುರಿದು ಮಂಗಳೂರು ನಗರವನ್ನು ಸ್ಮಾರ್ಟ್ ಮಾಡಲಾಗುತ್ತಿದ್ದರೂ, ಜನರಿಗೆ ಶುದ್ಧ ಕುಡಿಯವ ನೀರು ಪೂರೈಕೆ ಬಗ್ಗೆ ಕ್ರಮ ಆಗದಿರುವ ಬಗ್ಗೆ ಗಮನ ಹರಿಸಬೇಕು ಎಂದರು.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಅವರು ಪಾಲಿಕೆ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಕುರಿತಂತೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ, ಮನಪಾದಲ್ಲಿ ಆಡಳಿತದಲ್ಲಿರುವುದು ಬಿಜೆಪಿ. ಸದಸ್ಯರ ಆರೋಪಕ್ಕೆ ಸಂಬಂಧಿಸಿ ಮೇಯರ್ ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಯಾವ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ತನಿಖೆಗೆ ಒತ್ತಾಯಿಸಲಾಗುವುದು ಎಂದು ಐವನ್ ಡಿಸೋಜ ಹೇಳಿದರು.

ಪಾಲಿಕೆಯಲ್ಲಿ ಪ್ರಸಕ್ತ ಬಿಜೆಪಿ ಆಡಳಿತಾವಧಿಯ ಪ್ರಥಮ ಸಭೆಯಿಂದಲೇ ನಗರದ ಎಸ್ ಟಿಪಿಗಳ ಅವ್ಯವಸ್ಥೆ ಬಗ್ಗೆ ವಿಪಕ್ಷ ಸದಸ್ಯರು ಗಮನ ಸೆಳೆಯುತ್ತಿದ್ದಾರೆ. ನಗರದ ಎಸ್ ಟಿಪಿಗಳ ವೈಫಲ್ಯದ ಬಗ್ಗೆ ಮಾತನಾಡಲಾಗುತ್ತಿದೆ. ಬಿಜೆಪಿಯ ಸದಸ್ಯರು ಕೂಡಾ ಪ್ರತಿ ಕೌನ್ಸಿಲ್ ಸಭೆಯಲ್ಲೂ ಎಸ್ ಟಿಪಿಗಳ ಕಾರ್ಯ ನಿರ್ವಹಣೆ ಬಗ್ಗೆ ಆಕ್ಷೇಪಿಸುತ್ತಿದ್ದಾರೆ. ಗುತ್ತಿಗೆದಾರರು ಷರತ್ತುಗಳನ್ನು ಪಾಲನೆ ಮಾಡುತ್ತಿಲ್ಲ ಎಂಬುದರ ಬಗ್ಗೆ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಎಸ್ ಟಿಪಿ, ವೆಟ್ ವೆಲ್ ಗಾಗಿ ನೂರಾರು ಕೋಟಿ ರೂ.ವನ್ನು ಅಮೃತ್ ಯೋಜನೆ, ಕುಡ್ಸೆಂಪ್ ನಡಿ ಇಡಲಾಗಿದ್ದರೂ ಸಮಸ್ಯೆ ಬಗೆಹರಿಸಲಾಗಿಲ್ಲ ಎಂದು ಮಾಜಿ ಮೇಯರ್ ಶಶಿಧರ ಹೆಗ್ಡೆ ಆರೋಪಿಸಿದರು.

ಎಸ್ ಟಿಪಿ ನೀರು ರಾಜಕಾಲುವೆಗಳ ಮೂಲಕ ನದಿ, ಕೆರೆ ಸೇರುತ್ತಿರುವುದರಿಂದ ಜಲಚರಗಳಿಗೂ ತೊಂದರೆಯಾಗುತ್ತಿದೆ. ನಾನು ಪ್ರತಿನಿಧಿಸುವ ವಾರ್ಡ್ನಲ್ಲಿಯೇ ಆರು ವಾರ್ಡ್ಗಳ ನೀರು ರಾಜಕಾಲುವೆ ಸೇರುತ್ತಿದೆ. ಈ ಬಗ್ಗೆ ಕೌನ್ಸಿಲ್ನಲ್ಲಿ ಪ್ರಸ್ತಾಪಿಸಿದರೆ, ಹಿಂದಿನಿಂದಲೂ ಅದೇ ವ್ಯವಸ್ಥೆ ಎನ್ನುವ ಉತ್ತರ ಸಿಗುತ್ತದೆ. ಹಿಂದೆ ರಾಜಕಾಲುವೆಗಳಲ್ಲಿ ಹರಿಯುತ್ತಿದ್ದ ಕೊಳಚೆ ನೀರಿಗಿಂತ ಕಳೆದ ಐದು ವರ್ಷಗಳಲ್ಲಿ 50 ಪಟ್ಟು ಹೆಚ್ಚು ನೀರು ಹರಿಯುತ್ತಿದೆ ಎಂದು ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಲ್ಯಾನ್ಸಿಲಾಟ್ ಪಿಂಟೋ, ಸಂಶುದ್ದೀನ್, ಝೀನತ್, ಹರಿನಾಥ್, ಕೇಶವ, ಭಾಸ್ಕರ ಕೆ., ನಾಮನಿರ್ದೇಶಿತ ಸದಸ್ಯರಾದ ಸತೀಶ್ ಪೆಂಗಲ್, ಚೇತನ್, ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ನನ್ನ ಮನೆಯ ನೀರು ಶುದ್ಧೀಕರಣದ ಪ್ಯೂರಿಫಯರ್ ಒಂದು ತಿಂಗಳ ಅವಧಿಯಲ್ಲಿ ಶುಚಿಗೊಳಿಸಿದಾಗ ಭಾರೀ ಪ್ರಮಾಣದಲ್ಲಿ ಮಣ್ಣಿನ ರಾಡಿ ಕಂಡು ಬಂದಿದೆ ಎಂದು ತಮ್ಮ ಮೊಬೈಲ್ ನಲ್ಲಿದ್ದ ವೀಡಿಯೋ ಪ್ರದರ್ಶಿಸಿದ ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಬೆಂದೂರ್ ವೆಲ್ ನಿಂದ ಎಂಸಿಎಫ್ ಮಾರ್ಗದಲ್ಲಿ ಸರಬರಾಜು ಆಗುವ ಕುಡಿಯುವ ನೀರು ಶುದ್ಧೀಕರಣವೇ ಆಗುತ್ತಿಲ್ಲ. ಮನಪಾ ಅಧಿಕಾರಿಗಳ ಪ್ರಯೋಗಾಲಯದ ವರದಿಯೂ ಸುಳ್ಳು. ನೀರಿನ ವಿಚಾರದಲ್ಲಿ ಈ ರೀತಿ ಅಸಡ್ಡೆ ಧೋರಣೆ ತೋರುವುದು ಸರಿಯಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News