ದ.ಕ.ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ

Update: 2023-09-19 17:06 GMT

ಮಂಗಳೂರು, ಸೆ.19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಶ್ರದ್ಧೆ, ಭಕ್ತಿ, ಸಡಗರದಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು.

ಪ್ರಮುಖ ಗಣಪತಿ ದೇವಸ್ಥಾನಗಳಲ್ಲಿ ವಿಘ್ನವಿನಾಶಕ ಗಣಪತಿಗೆ ವಿಶೇಷ ಪೂಜೆ, ಗಣಯಾಗ, ರಂಗಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಗಣೇಶನ ಮೂರ್ತಿಗಳನ್ನು ಹಲವು ಕಡೆ ಪ್ರತಿಷ್ಠಾಪಿಸಲಾಗಿದ್ದು, ಅದ್ದೂರಿಯಾಗಿ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಗಣಪತಿ ದೇವಸ್ಥಾನ ಮತ್ತು ಸಾರ್ವಜನಿಕ ಗಣೇಶೋತ್ಸವಗಳಿಗೆ ಸಾವಿರಾರು ಜನ ಆಗಮಿಸಿ, ಗಣೇಶನಿಗೆ ಪೂಜೆ ಸಲ್ಲಿಸಿದರು. ಕೆಲವು ಕಡೆ ಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ, ರಂಗೋಲಿ ಬಿಡಿಸುವ ಸ್ಫರ್ಧೆಗಳು, ಭಕ್ತಿಗೇತೆ ಗಾಯನ ಸ್ಪರ್ಧೆಗಳು , ಭಜನೆ ನಡೆದವು.

ದ.ಕ. ಜಿಲ್ಲೆಯಲ್ಲಿ 381 ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಮಂಗಳೂರು ಕಮಿಷನರೆಟ್ ವ್ಯಾಪ್ತಿ ಯಲ್ಲಿ (ಮುಲ್ಕಿ, ಮೂಡುಬಿದಿರೆ, ಉಳ್ಳಾಲ, ಸುರತ್ಕಲ್, ಪಣಂಬೂರು) 166, ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 215 ಗಣೇಶೋತ್ಸವಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

ಮಂಗಳೂರಿನ ಕದ್ರಿ ಜೋಗಿ ಮಠದಲ್ಲಿ 100ನೇ ವರ್ಷದ ಶ್ರೀಗಣೇಶೋತ್ಸವ, ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ 76ನೇ ಸಾರ್ವಜನಿಕ ಗಣೇಶೋತ್ಸವ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ, ಪೊಲೀಸ್‌ಲೇನ್‌ನ ಶ್ರೀ ಮಿನೀಶ್ವರ ಮಹಾಗಣಪತಿ ದೇವಸ್ಥಾನ, ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ, ಶ್ರೀ ಮಂಗಳಾದೇವಿ ದೇವಸ್ಥಾನ, ಮಣ್ಣಗುಡ್ಡ ಹರಿದಾಸ ಲೇನ್, ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ದೇವಸ್ಥಾನಗಳಲ್ಲಿ ಶ್ರೀ ಸಿದ್ದಿವಿನಾಯಕನಿಗೆ ವಿವಿಧ ಪೂಜೆ ಪುರಸ್ಕಾರಗಳು ನಡೆಯಿತು.

ಮನೆ ಮನೆಗಳಲ್ಲಿ ಗಣಪತಿಯ ವಿಗ್ರಹ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಟುಂಬಸ್ಥರು ಸೇರಿ ಮನೆ ತುಂಬಿಸಿ, ಹೊಸ ಅಕ್ಕಿ ಊಟ ಮಾಡುವ ಕಾರ್ಯಕ್ರಮ ನಡೆಯಿತು. ಕೆಲವು ಕಡೆ ಮಂಗಳವಾರ ಸಾಯಂಕಾಲ ಸಾರ್ವಜನಿಕ ಗಣೇಶೋತ್ಸವದ ಮೂರ್ತಿಗಳನ್ನು ಜಲಸ್ತಂಭನಗೊಳಿಸಲಾಗಿದೆ.

ಕೆಲವೆಡೆ ಮೂರು, ಐದು, ಏಳು ಹಾಗೂ ಒಂಬತ್ತನೇ ದಿನ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆ ಮಾಡಲಾಗುವುದು. ಗಣೇಶೋತ್ಸವದ ಅಂಗವಾಗಿ ಕೋಮು ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಲ ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News