ಮುಸ್ಲಿಂ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಸರಕಾರ ಬದ್ಧ: ಸಚಿವರು, ಸಿಎಂ ರಾಜಕೀಯ ಕಾರ್ಯದರ್ಶಿ ಭರವಸೆ

Update: 2023-09-05 15:47 GMT

ಮಂಗಳೂರು, ಸೆ.5: ಕರಾವಳಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವು ಕಳೆದ ಐದು ವರ್ಷದಲ್ಲಿ ಸಾಕಷ್ಟು ಹಿಂಸೆ, ನೋವು ಅನುಭವಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಶಾಂತಿ ಬಯಸುವ ಪ್ರತಿಯೊಬ್ಬರೂ ಕೂಡ ಆವತ್ತೇ ಜಾತ್ಯತೀತ ಸರಕಾರವು ಅಧಿಕಾರಕ್ಕೇರುವುದನ್ನು ಬಯಸಿದ್ದರು. ಅದರಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯ ದಲ್ಲಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಮ್ಮ ಸರಕಾರವು ಮುಸ್ಲಿಂ ಸಮುದಾಯ ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಬದ್ಧವಾಗಿದೆ ಎಂದು ರಾಜ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಹಾಗೂ ರಾಜ್ಯ ಪೌರಾಡಳಿತ, ಹಜ್ ಸಚಿವ ರಹೀಂ ಖಾನ್ ಮತ್ತು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಭರವಸೆ ನೀಡಿದರು.

ದ.ಕ.ಜಿಲ್ಲಾ ಅಭಿನಂದನಾ ಸಮಿತಿ ಹಾಗೂ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ನಗರದ ಪುರಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಳೆದ ಬಿಜೆಪಿ ಸರಕಾರವು ವಿದ್ಯಾರ್ಥಿ ವೇತನ, ಅರಿವು ಯೋಜನೆಯಲ್ಲಿ ಮುಸ್ಲಿಮರಿಗೆ ಸಾಕಷ್ಟು ಅನ್ಯಾಯ ಮಾಡಿತ್ತು. ನಮ್ಮ ಸರಕಾರವು ಆ ಅನ್ಯಾಯವನ್ನು ಸರಿಪಡಿಸುತ್ತಿದೆ. ಕಾಂಗ್ರೆಸ್ ಯಾವತ್ತೂ ಕೂಡ ಯಾರಿಗೂ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ. ಎಲ್ಲಾ ಸಮುದಾಯವನ್ನು ಸರಿ ಸಮಾನವಾಗಿ ಕಂಡಿದೆ. ಮುಂದೆಯೂ ಕಾಣುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಮುಸ್ಲಿಮರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಲಿದ್ದೇವೆ ಎಂದು ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ನುಡಿದರು.

ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರ ಶಿಲಾನ್ಯಾಸವನ್ನೂ ನೆರವೇರಿಸಲಾಗುವುದು. ನಾವು ಉನ್ನತ ಸ್ಥಾನದಲ್ಲಿದ್ದರೂ ಕೂಡ ಜನಸಾಮಾನ್ಯರ ಸೇವಕರಾಗಿದ್ದೇವೆ. ಹಾಗಾಗಿ ಸಮುದಾಯದ ಸಬಲೀಕರಣ ಮಾಡಲಿದ್ದೇವೆ ಎಂದು ಸಚಿವ ರಹೀಂ ಖಾನ್ ಹೇಳಿದರು.

ರಾಜ್ಯಕ್ಕೆ ಮುಸ್ಲಿಮರ ಕೊಡುಗೆ ಅಪಾರವಿದೆ. ಆದರೆ ಅದು ಸ್ವತಃ ಮುಸ್ಲಿಮರಿಗೂ ತಿಳಿದಿಲ್ಲ. ಸಂವಹನದ ಕೊರತೆಯನ್ನು ನಾವೇ ದೂರ ಮಾಡಿಕೊಂಡು ಮುನ್ನಡೆಯಬೇಕು. ಈ ಹಿಂದೆ ಎಸ್ಸಿ-ಎಸ್ಟಿಗೆ ಮಾತ್ರ ಮೀಸಲಾಗಿದ್ದ ಸಾಲ ಯೋಜನೆ ಹಾಗು 1 ಕೋ.ರೂ. ಮೊತ್ತದ ಗುತ್ತಿಗೆ ಕಾಮಗಾರಿಗಳನ್ನು ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೂ ಮೀಸಲಿಡಲಾಗಿದೆ. ಸರಕಾರದ ಗ್ಯಾರಂಟಿ ಸಹಿತ ಇತರ ಎಲ್ಲಾ ಯೋಜನೆಗಳನ್ನು ಮುಸ್ಲಿಮರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹೇಳಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್ ‘ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಇಂದು ಉನ್ನತ ಸ್ಥಾನಕ್ಕೇರಿರುವೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಈಗಾಗಲೆ ಸಚಿವರು ನೀಡಿದ್ದಾರೆ. ನಿಮ್ಮೊಂದಿಗೂ ನಾನೂ ಇದ್ದೇನೆ. ನಾವೆಲ್ಲಾ ಸೇರಿಕೊಂಡು ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗೆ ಪಣತೊಡೋಣ. ದ.ಕ.ಜಿಲ್ಲೆಯನ್ನು ಸೌಹಾರ್ದದ ಕೇಂದ್ರವನ್ನಾಗಿಸೋಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಸಂಯುಕ್ತ ಖಾಝಿ ಅಲ್ಹಾಜ್ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ‘ಅಲ್ಲಾಹನು ತಾನು ಉದ್ದೇಶಿಸಿದವರಿಗೆ ಅಧಿಕಾರ ನೀಡುವನು. ಆದರೆ ಈ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಡಬೇಕು. ಜನರ ಮೇಲೆ ಕರುಣೆ ತೋರುವ, ಜಾತಿ-ಮತ ಮರೆತು ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಸು ಸದ್ಯ ಆಡಳಿತ ನಡೆಸುವವರಲ್ಲಿದೆ. ಹಾಗಾಗಿ ಸಚಿವರ ಸಹಿತ ಅಧಿಕಾರದಲ್ಲಿರುವವರು ಸಮಾಜದ ಜೊತೆ ಸಮುದಾಯದ ಹಿತ ಕಾಪಾಡಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಭಿನಂದನಾ ಸಮಿತಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲ ಕುಂಞಿ ‘ನಾವು ಇಂದು ಆರು ಮಂದಿಯನ್ನು ಸನ್ಮಾನಿಸಲು ಬಯಸಿದ್ದೆವು. ಕಾರಣಾಂತರದಿಂದ ಇಬ್ಬರಿಗೆ ಬರಲಿಕ್ಕೆ ಆಗಲಿಲ್ಲ. ಸನ್ಮಾನ ಸ್ವೀಕರಿಸಿದ ಇತರ ನಾಲ್ವರ ಸೇವೆಯು ಅಪಾರವಾಗಿದೆ. ಮುಂದೆ ಮತ್ತಷ್ಟು ಜನಸೇವೆ ಮಾಡಲು ಅವರಿಗೆ ಈ ಕಾರ್ಯಕ್ರಮ ಪ್ರೇರಣೆಯಾಗಲಿ’ ಎಂದು ಆಶಿಸಿದರು.

ದ.ಕ. ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಮುಖ್ಯ ಅತಿಥಿಗಳಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಎನ್‌ಕೆಎಂ ಶಾಫಿ ಸಅದಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಭಾಗವಹಿಸಿದ್ದರು.

ಅಭಿನಂದನಾ ಸಮಿತಿಯ ಸಂಚಾಲಕ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅಭಿನಂದನಾ ಭಾಷಣ ಮಾಡಿದರು. ಯುವ ವಿದ್ವಾಂಸ ಡಾ.ಎಮ್ಮೆಸ್ಸೆಂ ಅಬ್ದುರ‌್ರಶೀದ್ ಝೈನಿ ಕಾಮಿಲ್ ಸನ್ಮಾನ ಪತ್ರ ವಾಚಿಸಿದರು. ಅಭಿನಂದನಾ ಸಮಿತಿಯ ಸದಸ್ಯ ಮುಮ್ತಾಝ್ ಅಲಿ ವಂದಿಸಿದರು. ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖ ಬೇಡಿಕೆಗಳು

*ಜಿಲ್ಲೆಯ ಮುಸ್ಲಿಂ ಸಮುದಾಯದ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕು.

* ಸ್ವ ಉದ್ಯೋಗಕ್ಕೆ ವಿಶೇಷ ಆರ್ಥಿಕ ನೆರವು ಪ್ರಕಟಿಸಬೇಕು.

*ಉನ್ನತ ಶಿಕ್ಷಣ ಪಡೆಯುವ ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇರುವ ನಿಯಮಗಳನ್ನು ಸಡಿಲಿಸಬೇಕು.

*ಕಳೆದ ಸರಕಾರವು ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿದ್ದ ಮುಸ್ಲಿಂ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆಗೊಳಿಸಿದೆ. ಅವರನ್ನು ಮರಳಿ ಜಿಲ್ಲೆಗೆ ಕರೆಸಿಕೊಳ್ಳಬೇಕು.

*ಮದ್ರಸ ಶಿಕ್ಷಕರಿಗೆ ಗೌರವ ಧನ ಪಾವತಿಸುವ ವ್ಯವಸ್ಥೆ ಕಲ್ಪಿಸಬೇಕು.

*ಮುಸ್ಲಿಂ ಮಹಿಳಾ ರೋಗಿಗಳು ವಕ್ಫ್ ಮಂಡಳಿಯಿಂದ ಪಡೆಯುವ ಅನುದಾನದ ನಿಯಮಗಳನ್ನು ಸರಳೀಕರಣಗೊಳಿಸಬೇಕು.

*ಶೀಘ್ರದಲ್ಲೇ ಹಜ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಬೇಕು.










































 


 


 


 


 


 


 


 


 


 


 


 


 


 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News