ಭಾರೀ ಮಳೆ: ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ
ಬೆಳ್ತಂಗಡಿ: ತಾಲೂಕಿನ ನೆರಿಯ ಪ್ರದೇಶದಲ್ಲಿ ಬುಧವಾರ ಅಪರಾಹ್ನ ಭಾರೀ ಮಳೆ ಸುರಿದಿದ್ದು ನೆರಿಯ ಸೇತುವೆ ಸಂಜೆಯ ವೇಳೆ ಮತ್ತೆ ಮುಳುಗಡೆಯಾಗಿದ್ದು ಜನರು ಆತಂಕದಲ್ಲಿದ್ದಾರೆ.
ನೆರಿಯ ಗ್ರಾಮದ ಕಾಟಾಜೆ, ಪುಲ್ಲಾಜೆ ಪರಿಸರದಲ್ಲಿ ಭಾರೀ ನೀರು ಹರಿದು ಬಂದಿದ್ದು ತೋಟಗಳು ಗದ್ದೆಗಳು ಜಲಾವೃತ ಗೊಂಡಿವೆ. ಭಾರೀ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ನದಿಯಲ್ಲಿ ಹರಿದು ಬಂದಿದೆ. ಮಂಗಳವಾರ ರಾತ್ರಿಯ ವೇಳೆ ಇದೇ ರೀತಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು . ಇದೀಗ ಬುಧವಾರ ಮತ್ತೆ ಪ್ರವಾಹದಂತೆ ನದಿಯಲ್ಲಿ ನೀರು ಬಂದಿರುವುದು ಜನರಲ್ಲಿ ಭಯ ಮೂಡಿಸಿದೆ. ಅಪರಾಹ್ನ ನೆರಿಯ ಪ್ರದೇಶದಲ್ಲಿ ಸಾಮಾನ್ಯ ಮಳೆ ಮಾತ್ರ ಸುರಿದಿದೆ. ಆದರೂ ನದಿಯಲ್ಲಿ ಹಾಗೂ ತೊರೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಏರಿಕೆಯಾಗಿದೆ.
ಚಾರ್ಮಾಡಿಯಲ್ಲಿ ರಸ್ತೆಯಲ್ಲಿ ಹರಿದ ನೀರು; ಗುಡ್ಡ ಕುಸಿತ
ಚಾರ್ಮಾಡಿ ಘಾಟಿಯಲ್ಲಿಯೂ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದಿದೆ. ವಾಹನಗಳ ಸಂಚಾರಕ್ಕೂ ಘಾಟಿಯಲ್ಲಿ ಅಡಚಣೆ ಯುಂಟಾಗಿತ್ತು.
ಘಾಟಿಯ ಸಣ್ಣ ಜಲಪಾತಗಳಲ್ಲಿ ಪ್ರವಾಹದಂತೆ ನೀರು ಬಂದಿದೆ. ಘಾಟಿಯ ಮೂರನೇ ತಿರುವಿನ ಸಮೀಪ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದು ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಗೆ ಬಿದ್ದ ಮರಗಳನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಚಾರ್ಮಾಡಿ ಘಾಟಿಯ ಮೇಲ್ಭಾಗದಿಂದ ಹರಿದು ಬಂದ ನೀರು ನೇರವಾಗಿ ನೆರಿಯ ಹಳ್ಳವನ್ನು ಸೇರುತ್ತಿದ್ದು ಘಾಟಿಯ ಮೇಲ್ಭಾಗದಲ್ಲಿ ಸುರಿದ ಮಳೆ ಹಾಗೂ ಭೂ ಕುಸಿತದಿಂದಾಗಿ ನೆರಿಯದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.